
ದೀಪಾವಳಿ ಹಬ್ಬದ ಹಿನ್ನೆಲೆ ಸರಣಿ ರಜೆ ಹಾಗೂ ಮಳೆ ಕೊಂಚ ಬಿಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಿದೆ.
ನಗರದ ಎಂಟು ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ, ದುರಸ್ತಿ ಮಾಡುವ ಕಾರ್ಯ ಆರಂಭವಾಗಿದೆ. ಈ ವಾರದೊಳಗೆ ಬಹುತೇಕ ರಸ್ತೆ ಗುಂಡಿಗಳನ್ನು ಮುಚ್ಚುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಬಿನ್ನಿಮೀಲ್ಸ್, ವಿಲ್ಸನ್ ಗಾರ್ಡನ್, ಔಟರ್ ರಿಂಗ್ ರಸ್ತೆ ಸವೀರ್‍ಸ್ ರಸ್ತೆ, ದೊಡ್ಡಾನೆಕುಂದಿ, ಮಾರತ್‌ಹಳ್ಳಿ, ಇಬ್ಬಲೂರು, ಇಮ್ಮಡಿಹಳ್ಳಿ ರಸ್ತೆ, ಹಗದೂರು ರಸ್ತೆ, ವೈಟ್‌ಫೀಲ್ಡ್ ರಸ್ತೆ, ಸಿದ್ದಾಪುರ ನಲ್ಲೂರಹಳ್ಳಿ ರಸ್ತೆ, ಗುಂಜೂರು ರಸ್ತೆ, ಶಾಂತಿನಗರ, ಆರ್ ಟಿನಗರ ಸೇರಿದಂತೆ ನಾನಾ ಕಡೆ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಹಬ್ಬದ ಸಂದರ್ಭದಲ್ಲೂ ಕಾರ್ಯನಿರ್ವಹಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲಿ ೨೦ ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮತ್ತೊಂದೆಡೆ, ಯಲಹಂಕದಲ್ಲಿ ಬಿಬಿಎಂಪಿ ತನ್ನ ಸ್ವಂತ ಡಾಂಬರು ಘಟಕವನ್ನು ಹೊಂದಿದೆ.
ಇದಲ್ಲದೆ, ಯಲಹಂಕ, ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ಖಾಸಗಿಯವರಿಂದ ತಲಾ ಒಂದು ಘಟಕವನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ.
ಈ ಐದು ಘಟಕಗಳಿಂದ ಮಿಶ್ರಣವನ್ನು ರವಾನಿಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತಗೊಳಿಸಲಾಗಿದೆ. ಸಾಧ್ಯವಾದಷ್ಟು ಬೇಗ ಗುಂಡಿಗಳಿಗೆ ತೇಪೆ ಹಾಕಲಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ರಜೆ ಇದ್ದರೂ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಇಂಜಿನಿಯರೊಬ್ಬರು ತಿಳಿಸಿದರು.
ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಿಲುಕಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ.
ಮೊನ್ನೆ ಓಕಳಿಪುರಂನ ಸುಜಾತ ಥಿಯೇಟರ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ರಸ್ತೆಗಳನ್ನು ಮುಚ್ಚದ ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಕಿಡಿಕಾರಿತ್ತು.
ಬೇಕಾಬಿಟ್ಟಿಯಾಗಿ ರಸ್ತೆ ಗುಂಡಿ ಮುಚ್ಚಿ, ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನಿರ್ಲಕ್ಷ್ಯವಹಿಸುತ್ತಿರುವ ಬಿಬಿಎಂಪಿ ಇಂಜಿನಿಯರ್‌ಗಳಿಗೆ ರಸ್ತೆ ಗುಂಡಿ ಮುಚ್ಚಲು ತರಬೇತಿ ನೀಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮೂರರಿಂದ ಐದು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡಿ, ಹಲವು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಎಂಜಿನಿಯರ್‌ಗಳಿಗೆ ಭಾರತೀಯ ರಸ್ತೆ ಕಾಂಗ್ರೆಸ್‌ನಲ್ಲಿ ನಿಗದಿಯಾಗಿರುವ ನಿಯಮದಂತೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಬರುತ್ತಿಲ್ಲ.
ಬೇಕಾಬಿಟ್ಟಿಯಾಗಿ ರಸ್ತೆ ಗುಂಡಿ ಮುಚ್ಚುತ್ತಾ, ತೇಪೆ ಕೆಲಸ ಮಾಡುತ್ತಿರುವುದರಿಂದ ನಗರದಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ.
ಇದಕ್ಕೆ ಇಂಜಿನಿಯರ್‌ಗಳ ಅಜ್ಞಾನ ಮತ್ತು ಬೇಜಾವಾಬ್ದಾರಿತನವೇ ಕಾರಣ ಎಂದು ಅರಿತಿರುವ ಬಿಬಿಎಂಪಿ ಹಿರಿಯ ಅಧಿಕಾರಿಗಳು ತರಬೇತಿ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಿ, ಇಂಜಿನಿಯರ್‌ಗಳಿಗೆ ತರಬೇತಿ ನೀಡಲಿದ್ದಾರೆ.