ರಸ್ತೆಗುಂಡಿ ಮುಚ್ಚುವ ಕಾಮಗಾರಿ ಕಳಪೆ : ಬಿಬಿಎಂಪಿ ಮತ್ತೆ ಎಡವಟ್ಟು

ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಬಿಬಿಎಂಪಿ ಮತ್ತೆ ಎಡವಿದೆ. ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚು ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಆದರೆ, ಬಿಬಿಎಂಪಿಯವರು ಮುಚ್ಚುತ್ತಿರುವ ರಸ್ತೆಗುಂಡಿಗಳು ಮತ್ತೆ ಬಾಯ್ಬಿಡತೊಡಗಿವೆ.
ಬೆಳಿಗ್ಗೆ ಹಾಕಿದ ತೇಪೆ ಮಧ್ಯಾಹ್ನದ ಹೊತ್ತಿಗೆ ಕಿತ್ತು ಬರುತ್ತಿವೆ. ಜೊತೆಗೆ ಗುಂಡಿ ಮುಚ್ಚಲು ಬರೀ ಜಲ್ಲಿಕಲ್ಲು, ಪೌಡರ್ ಬಳಕೆ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಗುಂಡಿ ಮುಚ್ಚುವ ಕಾರ್ಯದಲ್ಲಿ ಪಾಲಿಕೆಯ ಕಣ್ಣು ಒರೆಸುವ ತಂತ್ರಕ್ಕೆ ಮೊರೆ ಹೋಗಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕಳಪೆಯಾಗಿರುವುದು ಗೋಚರಿಸುತ್ತಿದೆ.
ಚಾಮರಾಜಪೇಟೆಯಲ್ಲಿ ಬಿಬಿಎಂಪಿಯ ಕಳಪೆ ಕಾಮಗಾರಿ ಇದೀಗ ಬಟಾಬಯಲಾಗಿದ್ದು, ಸಾರ್ವಜನಿಕರು ಕಳಪೆ ಕಾಮಗಾರಿಯನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಇಡಿ ನಗರದ ರಸ್ತೆಗಳು ಗುಂಡಿಬಿದ್ದಿದ್ದರೂ ಬಿಬಿಎಂಪಿಯವರು ಕಳಪೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನೇ ಆದರೂ ತನ್ನ ಬುದ್ದಿ ಬಿಡದ ಬಿಬಿಎಂಪಿ ಅಧಿಕಾರಿಗಳ ಧೋರಣೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.