ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಮೀನಾಮೇಷ, ವಾಹನ ಸವಾರರ ಜೀವಕ್ಕಿಲ್ಲ ಗ್ಯಾರಂಟಿ

ಸಿಲಿಕಾನ್ ಸಿಟಿಯ ರಸ್ತೆ ಗಂಡಾಗುಂಡಿಗೆ ಈಗಾಗಲೇ 15ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೂ ಬಿಬಿಎಂಪಿ ಸಿಬ್ಬಂದಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ದ್ವಿಚಕ್ರ ವಾಹನಗಳಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಸ್ತೆ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ.
ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದಂತೂ ತಂತಿ ಮೇಲಿನ ನಡಿಗೆಯಂತಾಗಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಯಮ ಲೋಕಕ್ಕೆ ಪ್ರಯಾಣ ಬೆಳೆಸಿದಂತೆಯೇ ಸರಿ.
ನಗರದ ಯಾವುದೇ ಪ್ರದೇಶಗಳಿಗೆ ತೆರಳಿದರೂ ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳೇ ಕಂಡು ಬರುತ್ತಿವೆ.ಈಗಾಗಲೇ ಹಲವಾರು ಮಂದಿ ರಸ್ತೆಗುಂಡಿಯಿಂದ ಉರುಳಿಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳಿವೆ. ಕೆಲವರಂತೂ ಸಾವಿನ ದವಡೆಯಿಂದ ಪಾರಾಗಿ ಬಂದಿರುವುದು ಸುಳ್ಳಲ್ಲ.
ಎರಡು ದಿನಗಳ ಹಿಂದೆ ಯುವತಿಯೊಬ್ಬಳು ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದು ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಕಸ್ತೂರಿನಗರದ ಮೇಲ್ಸೇತುವೆ ಮೇಲೆ ಯುವತಿಯೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ತೆರಳುವಾಗ ರಸ್ತೆಗುಂಡಿ ತಪ್ಪಿಸಲು ಹೋಗಿ ಉರುಳಿಬಿದ್ದಿರುವ ದೃಶ್ಯವನ್ನು ಕಾರು ಚಾಲಕರೊಬ್ಬರು ಸೆರೆ ಹಿಡಿದಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.ಯುವತಿ ಉರುಳಿ ಬಿದ್ದಾಗ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕ ಯುವತಿ ಬೀಳುವುದನ್ನು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಒಂದು ವೇಳೆ ಹಿಂದಿನಿಂದ ಬರುತ್ತಿದ್ದ ವಾಹನ ವೇಗವಾಗಿ ಸಂಚರಿಸಿ ಬಿದ್ದಿದ್ದ ಯುವತಿ ಮೇಲೆ ಹರಿದಿದ್ದರೆ ಭಾರಿ ಪ್ರಮಾದವಾಗುತ್ತಿತ್ತು.ಆದರೆ, ಕಾರು ಚಾಲಕನ ಚಾಣಕ್ಷತನದಿಂದ ಆಗಬಹುದಾದ ದುರಂತ ತಪ್ಪಿದಂತಾಗಿದೆ. ಇದು ಕೇವಲ ಒಂದು ಉದಾಹರಣೆ ಮಾತ್ರ ಪ್ರತಿನಿತ್ಯ ನಗರದಲ್ಲಿ ಇಂತಹ ನೂರಾರು ಘಟನೆಗಳು ಜರುಗುತ್ತಿವೆ.
ಈಗಲಾದರೂ ಬಿಬಿಎಂಪಿಯವರು ಎಚ್ಚೆತ್ತುಕೊಂಡು ನಗರದ ರಸ್ತೆಗಳನ್ನು ಗುಂಡಿಮುಕ್ತ ಗೊಳಿಸು ವರೇ ಕಾದು ನೋಡಬೇಕಿದೆ.