
ರಸ್ತೆಗುಂಡಿ ಮುಚ್ಚದ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಗುಂಡಿಗಳನ್ನು ಮುಚ್ಚದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮತ್ತೆ ಎಚ್ಚರಿಕೆ ನೀಡಿದೆ. ಬಿಬಿಎಂಪಿ ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ಥಿ ನೇತೃತ್ವದ ವಿಭಾಗೀಯ ಪೀಠದಲ್ಲಿಂದು ನಡೆದ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿಯ ಸಬೂಬುಗಳನ್ನು ಒಪ್ಪಲು ಸಾಧ್ಯವಿಲ್ಲ. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.
ಮಳೆಗಾಲ ಪ್ರಾರಂಭವಾದರೂ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಪದೇ ಪದೇ ಕಾರಣಗಳನ್ನು ಹೇಳುವ ಅಗತ್ಯವಿಲ್ಲ ಎಂದು ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿದೆ. ರಸ್ತೆಗುಂಡಿ ಮುಚ್ಚುವ ಶುಲ್ಕದ ಬಗ್ಗೆ ವಿವಾದವಿದೆ. ಈ ಬಗ್ಗೆ ಎನ್‍ಹೆಚ್‍ಎಐ ಸಲಹೆ ಪಡೆಯಲಾಗುವುದು ಎಂದು ಹೈಕೋರ್ಟ್‍ಗೆ ಬಿಬಿಎಂಪಿ ಪರ ವಕೀಲರಾದ ಶ್ರೀನಿ ಮಾಹಿತಿ ನೀಡಿದರು. ಜೂನ್ 6ರ ವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿದರು.
ಬಿಬಿಎಂಪಿಗೆ ನೂತನ ಆಯುಕ್ತರು ಬಂದಿದ್ದಾರೆ. ಸಮಸ್ಯೆ ಬಗೆಹರಿಸಲು ಸಕ್ರಿಯವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ತಾಕೀತು ಮಾಡಿ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿದೆ.