ರಷ್ಯಾ-ಉಕ್ರೇನ್ ಯುದ್ಧವನ್ನು ಜಾಗತಿಕ ಸಮಸ್ಯೆ ಎಂದ ಬೈಡನ್

ಪ್ರಪಂಚವು ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ-ಉಕ್ರೇನ್ ಯುದ್ಧ ಈಗ ಯೂರೋಪಿಯನ್ ಆಂತರಿಕ ವಿಚಾರವಾಗಿ ಮಾತ್ರ ಉಳಿದಿಲ್ಲ. ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ತರಾಟೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತೆಗೆದುಕೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಮೂರು ತಿಂಗಳುಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಟೋಕಿಯೊದಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ತನ್ನ ಆರಂಭಿಕ ಹೇಳಿಕೆಯಲ್ಲಿ ಬೈಡನ್, ಉಕ್ರೇನ್ ಮೇಲೆ ರಷ್ಯಾದ ಯುದ್ಧವು ಮಾನವೀಯ ದುರಂತವನ್ನು ಉಂಟುಮಾಡಿದೆ ಮತ್ತು ಮುಗ್ಧ ನಾಗರಿಕರು ಬೀದಿಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದಿದ್ದಾರೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೋ ಬೈಡನ್ ಈ ಹೇಳಿಕೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಸಂಸ್ಕೃತಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಇದೀಗ ಕೇವಲ ಯುರೋಪಿಯನ್ ಆಂತರಿಕ ವಿಚಾರವಾಗಿ ಉಳಿದಿಲ್ಲ. ಜಾಗತಿಕ ಸಮಸ್ಯೆಯಾಗಿದೆ. ಉಕ್ರೇನ್ ತನ್ನ ಧಾನ್ಯಗಳನ್ನು ರಫ್ತು ಮಾಡದಂತೆ ರಷ್ಯಾ ತಡೆದಿರುವುದರಿಂದ ಜಾಗತಿಕ ಆಹಾರ ಬಿಕ್ಕಟ್ಟು ಉಲ್ಬಣಗೊಳ್ಳಬಹುದು. ರಷ್ಯಾ ಎಲ್ಲಿಯವರೆಗೂ ಯುದ್ಧವನ್ನು ಮುಂದುವರೆಸುತ್ತದೆಯೋ ಅಲ್ಲಿಯವರೆಗೂ ಅಮೆರಿಕ ತನ್ನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ ಎಂದು ಬೈಡನ್ ಹೇಳಿದ್ದಾರೆ.