Uncategorized

ರಂಗೇರಿದ ರಾಜ್ಯಸಭೆ ಚುನಾವಣೆ, ಬಿಜೆಪಿಯ 3ನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣಕ್ಕೆ

ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣೆ ರಂಗೇರತೊಡಗಿದೆ.

ಬಿಜೆಪಿಯಿಂದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ವಿಧಾನಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್ ಹಾಗೂ ಜೆಡಿಎಸ್‍ನಿಂದ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ನಿನ್ನೆ ಕಾಂಗ್ರೆಸ್‍ನಿಂದ ರಾಜ್ಯಸಭೆ ಮಾಜಿ ಸದಸ್ಯ ಜೈರಾಮ್‍ರಮೇಶ್, ಕೇಂದ್ರದ ಮಾಜಿ ಸಚಿವ ರೆಹಮಾನ್‍ಖಾನ್ ಪುತ್ರ ಮನ್ಸೂರ್ ಖಾನ್ ನಾಮಪತ್ರ ಸಲ್ಲಿಸಿದ್ದರು.

ನಾಲ್ಕು ಸ್ಥಾನಗಳಿಗೆ ಒಟ್ಟು 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಒಂದು ವೇಳೆ ಯಾರೂ ಕಣದಿಂದ ಹಿಂದೆ ಸರಿಯದೇ ಇದ್ದರೆ ಜೂನ್ 10ರಂದು ಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ.

ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೆಹರ್‍ ಸಿಂಗ್ ಅವರು ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.

ನಂತರ ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಅಶ್ವತ್ಥನಾರಾಯಣ ಸೇರಿದಂತೆ ಶಾಸಕರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶ್ಯಂಪೂರ್, ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.

ಮತದಾನ ಅನಿವಾರ್ಯ:ನಿನ್ನೆವರೆಗೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂಬ ನಿರೀಕ್ಷೆ ಗಳಿದ್ದವು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜಕೀಯಕ್ಕೆ ಮಹತ್ವದ ತಿರುವು ನೀಡಿದೆ.

ಈ ನಡುವೆ ಬಿಜೆಪಿ ಕೂಡ ಲೆಹರ್‍ ಸಿಂಗ್ ಅವರನ್ನು ಹೆಚ್ಚುವರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ಪಾಟಿ ಸವಾಲೆಸೆದಿದೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಶತಾಯಗತಾಯ ಠಕ್ಕರ್ ನೀಡಲೇಬೇಕೆಂದು ಮುಂದಾಗಿರುವ ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ನಾನಾ ರೀತಿಯ ರಣತಂತ್ರಗಳನ್ನು ಹೆಣೆಯುತ್ತಿದೆ.

ಈಗಿನ ವಿಧಾನಸಭೆ ಬಲಾಬಲ ಪ್ರಕಾರ ಬಿಜೆಪಿ ಪಕ್ಷೇತರ ಸದಸ್ಯರಾದ ಮಹೇಶ್, ನಾಗೇಶ್ ಮತ್ತು ಸ್ಪೀಕರ್ ಅವರನ್ನೊಳಗೊಂಡು ಒಟ್ಟು 122 ಸದಸ್ಯರನ್ನು ಹೊಂದಿದೆ. ತನ್ನ ಅಭ್ಯರ್ಥಿಗಳಿಗೆ ತಲಾ 45 ಮತಗಳಂತೆ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸುಲಭವಾಗಲಿದೆ. 32 ಮತಗಳು ಹೆಚ್ಚುವರಿಯಾಗಲಿವೆ.

ವಿಧಾನಸಭೆ ಸ್ಪೀಕರ್ ಕೂಡ ಮತದಾನದ ಹಕ್ಕು ಹೊಂದಿರುವುದರಿಂದ ಹೆಚ್ಚುವರಿ ಅಭ್ಯರ್ಥಿಯ ಗೆಲುವಿಗೆ 13 ಮತಗಳ ಅಗತ್ಯವಿದೆ.ಕಾಂಗ್ರೆಸ್ ಪಕ್ಷೇತರ ಸದಸ್ಯ ಶರತ್‍ಬಚ್ಚೇಗೌಡ ಅವರನ್ನೊಳಗೊಂಡಂತೆ 70 ಸದಸ್ಯರನ್ನು ಹೊಂದಿದೆ.

ಅಧಿಕೃತ ಅಭ್ಯರ್ಥಿ ಜೈರಾಮ್ ರಮೇಶ್ ಅವರ ಗೆಲುವಿಗೆ 45 ಮತಗಳ ಬಳಿಕ 25 ಮತಗಳು ಬಾಕಿ ಉಳಿಯಲಿವೆ. ಹೆಚ್ಚುವರಿ ಅಭ್ಯರ್ಥಿ ಮನ್ಸೂರ್ ಖಾನ್ ಗೆಲುವಿಗೆ ಇನ್ನೂ 20 ಮತಗಳ ಅಗತ್ಯವಿದೆ.

ಜೆಡಿಎಸ್ 32 ಸದಸ್ಯರನ್ನು ಹೊಂದಿದ್ದು, ಕುಪೇಂದ್ರರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳಲು ಇನ್ನೂ 13 ಮತಗಳನ್ನು ಪಡೆದುಕೊಳ್ಳಬೇಕಿದೆ.

ಆದರೆ, ಜೆಡಿಎಸ್‍ನಲ್ಲೇ ಬಹಳಷ್ಟು ಮಂದಿ ಶಾಸಕರು ಅನ್ಯಪಕ್ಷಗಳತ್ತ ಮುಖ ಮಾಡಿರುವುದರಿಂದ ಗೊಂದಲಗಳಾಗುವ ಸಾಧ್ಯತೆಗಳಿವೆ.ಚುನಾವಣೆಗೆ ವ್ಹಿಪ್ ಜಾರಿ ಮಾಡಲಾಗುತ್ತದೆ.

ಪ್ರತಿ ಮತವನ್ನು ತೋರಿಸಿ ಚಲಾವಣೆ ಮಾಡುವುದರಿಂದ ಅಡ್ಡ ಮತದಾನ ಮಾಡುವವರು ಸಿಕ್ಕಿ ಬೀಳಲಿದ್ದಾರೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮ ಗಂಭೀರವಾಗಲಿದೆ.

ಕೆಲ ಮೂಲಗಳ ಪ್ರಕಾರ ಬಂಡಾಯ ಶಾಸಕರು ಗೈರು ಹಾಜರಿಯಾಗುವ ತಂತ್ರಗಾರಿಕೆ ಬಗ್ಗೆಯೂ ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ನಾಮನಿರ್ದೇಶನಗೊಂಡಿರುವ ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.

ಎಲ್ಲಾ ರಾಜಕೀಯ ಲೆಕ್ಕಾಚಾರಗಳ ನಡುವೆ ಮೂರನೇ ಅಭ್ಯರ್ಥಿಯ ಗೆಲುವು ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗಿದ್ದು, ನಾನಾ ರೀತಿಯ ರಾಜಕೀಯ ಚದುರಂಗದಾಟಗಳು ಶುರುವಾಗಿವೆ.

ರಾಜಕೀಯ ಹೊಂದಾಣಿಕೆ ಸೇರಿದಂತೆ ಹಲವು ವಿಷಯಗಳನ್ನು ರಾಜ್ಯಸಭೆ ಚುನಾವಣೆ ಬಯಲು ಮಾಡಲಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button