ಅಪರಾಧ

ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ ಲಾಠಿ ಚಾರ್ಜ್

ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಿದ ಘಟನೆಯಿಂದ ಬೊಂಬೆ ನಗರಿ ಚನ್ನಪಟ್ಟಣ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ 50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಗುದ್ದಲಿ ಪೂಜೆ ನೆರವೇರಿಸಲು ಬಿಜೆಪಿ ಎಂಎಲ್‍ಸಿ ಯೋಗೇಶ್ವರ್ ಅವರು ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಯೋಗೇಶ್ವರ್ ಅವರು ಮೊದಲು ತಾಲೂಕಿನ ರಾಮಪುರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುತ್ತಿದ್ದಾಗೆ ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಪ್ರತಿಭಟನೆ ನಡೆಸಿದರು.ನಂತರ ಯೋಗೇಶ್ವರ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬೈರಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಮುಂದಾದಾಗಲೂ ಜೆಡಿಎಸ್ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಮುಂಜಾಗೃತಾ ಕ್ರಮವಾಗಿ ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದರು.ಜೆಡಿಎಸ್ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು.

ಕಾರ್ಯಕ್ರಮ ಮುಗಿಸಿ ಯೋಗೇಶ್ವರ್ ವಾಪಸ್ಸಾಗಲು ಮುಂದಾದಾಗ ಜೆಡಿಎಸ್ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದು ನಂತರ ಕಲ್ಲು ತೂರಾಟ ನಡೆಸಿದರು. ಮಾತ್ರವಲ್ಲ ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದ ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.ಘೋಷಣೆ: ಈ ಸಂದರ್ಭದಲ್ಲಿ ಸ್ಥಳದಲ್ಲಿ ಬೀಡುಬಿಟ್ಟಿದ್ದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ತಳ್ಳು-ನೂಕಾಟದ ವೇಳೆ ಜೆಡಿಎಸ್‍ನ ಹಿರಿಯ ಮುಖಂಡ ಗೋವಿಂದಹಳ್ಳಿ ನಾಗರಾಜ್ ಎಂಬುವವರ ಕೈ ಮುರಿದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಒಟ್ಟಾರೆ ಬೈರಾಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕಿಚ್ಚು ಕಟ್ಟೆಯೊಡೆದ ಪರಿಣಾಮ ಬೊಂಬೆನಗರಿ ರಣಾಂಗಣದಂತೆ ಬದಲಾಗಿದೆ. ಹೀಗಾಗಿ ಸ್ಥಳದಲ್ಲಿ ಮೂವರು ಡಿವೈಎಸ್‍ಪಿ, 15 ಮಂದಿ ಸರ್ಕಲ್ ಇನ್ಸ್‍ಪೆಕ್ಟರ್, 50ಕ್ಕೂ ಹೆಚ್ಚು ಸಬ್‍ಇನ್ಸ್‍ಪೆಕ್ಟರ್‍ಗಳು ಹಾಗೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ.

ಸಿಪಿವೈ ಆಕ್ರೋಶ; ಘಟನೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಯೋಗೇಶ್ವರ್ ಅವರು, ಇದು ಸರ್ಕಾರದ ಕಾರ್ಯಕ್ರಮ, ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬಂದಿಲ್ಲ.

ನನ್ನ ಅಭಿವೃದ್ಧಿ ಸಹಿಸಲಾರದೆ ಜೆಡಿಎಸ್ ಕಾರ್ಯಕರ್ತರ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸೋಲಿನ ಭೀತಿಯಿಂದ ಹತಾಶ ಮನೋಭಾವದಿಂದ ಈ ರೀತಿ ಗಲಾಟೆ ಮಾಡಿಸುತ್ತಿದ್ದಾರೆ ಇಂತಹ ಘಟನೆಗಳಿಗೆಲ್ಲಾ ನಾನು ಎದೆಗುಂದುವುದಿಲ್ಲ ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button