
ಇಂಧೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಕೈಗೆ ಆಗಿದ್ದ ನೋವು ಗುಣಪಡಿಸಲು ಯುವಕನೊಬ್ಬ ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿ ಸಾವನ್ನಪ್ಪಿದ್ದಾನೆ.
ಧರ್ಮೇಂದ್ರ ಎಂಬಾತನೇ ಸಾವನ್ನಪ್ಪಿದ ಯುವಕ. ಈತ ಯೂಟ್ಯೂಬ್‍ನಲ್ಲಿ ಸೋರೆಕಾಯಿ ರಸ ತಯಾರಿಸುವ ವಿಧಾನವನ್ನು ಕಲಿತು ಜ್ಯೂಸ್ ಮಾಡಿ ಕುಡಿದು ಪ್ರಾಣ ಬಿಟ್ಟಿದ್ದಾನೆ.
ತನಗಾಗಿದ್ದ ಕೈ ನೋವನ್ನು ಗುಣಪಡಿಸಲು ಧರ್ಮೇಂದ್ರ ಯೂಟ್ಯೂಬ್ ವಿಡಿಯೋವೊಂದರಲ್ಲಿ ಹೇಳಿದ್ದ ಸಲಹೆ ಮೇರೆಗೆ ಸೋರೆಕಾಯಿ ರಸವನ್ನು ತಯಾರಿಸಿದ್ದನಂತೆ.
ಹೀಗೆ ತಯಾರಿಸಿದ್ದ ಸೋರೆಕಾಯಿ ರಸವನ್ನು ಕುಡಿದ ಸ್ವಲ್ಪ ಸಮಯದ ನಂತರ ಧರ್ಮೇಂದ್ರನ ಆರೋಗ್ಯವು ಇದ್ದಕ್ಕಿದ್ದಂತೆಯೇ ಹದಗೆಟ್ಟಿದೆ.
ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಕುಟುಂಬಸ್ಥರು ಧರ್ಮೇಂದ್ರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆಂದು ವರದಿಯಾಗಿದೆ.
ಧರ್ಮೇಂದ್ರನ ಕುಟುಂಬಸ್ಥರು ಪೊಲೀಸರಿಗೆ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮೃತ ಧರ್ಮೇಂದ್ರನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಆತನ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೋಲಿಸರು ಹೇಳಿದ್ದಾರೆ.