ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸರಕಾರ ಕಣ್ಣು; ಮಾಹಿತಿ ಸಂಗ್ರಹ, ಸುಳ್ಳು ಸುದ್ದಿಗೆ ತಡೆಗೆ ನಿರ್ಧಾರ

ಕೋಲಾರ: ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ನ್ಯೂಸ್ ಚಾನೆಲ್‌ಗಳಿಗೆ ಕಡಿವಾಣ ಹಾಕಲು ಸರಕಾರ ಗಂಭೀರ ಚಿಂತನೆ ನಡೆಸಿದೆ.ಯುಟ್ಯೂಬ್ ಚಾನೆಲ್‌ಗಳ ಹಾವಳಿ ಬಗ್ಗೆ ನಿರಂತರವಾಗಿ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಪ್ರತಿಯೊಂದು ಜಿಲ್ಲೆಯ ಪೊಲೀಸರಿಂದ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದೆ.ಯುಟ್ಯೂಬ್ ಚಾನೆಲ್‌ಗಳ ಹೆಸರೇಳಿಕೊಂಡು ಹಣಕ್ಕಾಗಿ ಅಧಿಕಾರಿಗಳನ್ನು ಬೆದರಿಸುವುದು, ಅನುಮತಿ ಪಡೆಯದೆ ಸರಕಾರಿ ಕಚೇರಿಗಳಿಗೆ ಪ್ರವೇಶಿಸಿ ಚಿತ್ರೀಕರಣ ಮಾಡುವುದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವರದಿಗಳನ್ನು ಪ್ರಸಾರ ಮಾಡುವುದು, ಸಮಾಜದಲ್ಲಿ ಶಾಂತಿ ಕದಡುವ ಸುದ್ದಿ ಪ್ರಸಾರ ನಡೆಯುತ್ತಿದೆ.
ಇಂತಹ ಅನೈತಿಕ ಚಟುವಟಿಕೆ ತಡೆಯಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ನೋಂದಣಿಯಾಗದ ನ್ಯೂಸ್ ಚಾನೆಲ್‌ಗಳಿಗೆ ಬಿಸಿ ಮುಟ್ಟಿಸುವುದಕ್ಕಾಗಿ ಶೋಕಾಸ್ ನೋಟಿಸ್ ಜಾರಿಗೊಳಿಸಲು ಸರಕಾರ ಸಜ್ಜಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾನೆಲ್ ಹೆಸರು, ನಡೆಸುತ್ತಿರುವವರು ಯಾರು, ಯಾರಿಂದಾದರೂ ಅನುಮತಿ ಪಡೆದಿದ್ದಾರೆಯೇ, ಅವರ ಹಿನ್ನೆಲೆ ಹಾಗೂ ಅವರು ಪ್ರಸಾರ ಮಾಡುತ್ತಿರುವ ವಿಷಯಗಳ ಮತ್ತೊಬ್ಬರಿಗೆ ತೊಂದರೆಯಾಗುವ ರೀತಿಯಲ್ಲಿ ಹಾಗೂ ಮಾನಹಾನಿ ಮಾಡುವ ರೀತಿಯಲ್ಲಿ ಇವೆಯೇ ಎಂಬ ವಿವರಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಯುಟ್ಯೂಬ್ ವೇದಿಕೆಯಲ್ಲಿ ಒಂದು ವಿಷಯವನ್ನು ಎಡಿಟ್ ಮಾಡಿ ಪ್ರಸಾರ ಮಾಡಬೇಕಾದರೆ ಟ್ರೇಡ್ ಮಾರ್ಕ್ ನೋಂದಣಿ ಕಡ್ಡಾಯವಾಗಿರುತ್ತದೆ. ಜತೆಗೆ ಯುಟ್ಯೂಬ್ ನ್ಯೂಸ್ ಚಾನೆಲ್ ನಡೆಸಬೇಕಾದರೆ ಪ್ರತಿಯೊಬ್ಬರೂ ಟ್ರೇಡ್ ಮಾರ್ಕ್ ನೋಂದಣಿ, ಜಿಎಸ್‌ಟಿ ಸಂಖ್ಯೆ ಹಾಗೂ ಲೆಕ್ಕಪರಿಶೋಧನೆ ಮಾಡಿಸಬೇಕಾಗುತ್ತದೆ.
ನೋಂದಣಿ ಮಾಡದಿದ್ದರೆ ಅಂತಹ ಚಾನೆಲ್‌ಗಳನ್ನು ನಕಲಿ ಖಾತೆಗಳು ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದರೊಂದಿಗೆ ಫೇಸ್‌ಬುಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ನ್ಯೂಸ್ ಚಾನೆಲ್ ಮಾಡಬೇಕಾದರೂ ನೋಂದಣಿ ಅಗತ್ಯವಾಗಿರುತ್ತದೆ.
ಅದರಂತೆ ನೋಂದಣಿ ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಆರ್‌ಎನ್‌ಐಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.ಯುಟ್ಯೂಬ್‌ನಲ್ಲಿ ಇ ಮೇಲ್ ಐಡಿ ಹಾಗೂ ಆಧಾರ್ ಸಂಖ್ಯೆಯಿದ್ದರೆ ಯಾರೂ ಬೇಕಾದರೂ ಚಾನೆಲ್ ಮಾಡಿಕೊಳ್ಳಬಹುದು.
ತಮ್ಮ ವೈಯಕ್ತಿಕ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಯಾರಿಂದಲೂ ಅನುಮತಿ ಪಡೆಯಬೇಕಾಗಿಲ್ಲ. ಯಾವುದೇ ಎಡಿಟ್ ಮಾಡಿಕೊಳ್ಳದೆ, ಯಾವುದೇ ನ್ಯೂಸ್ ಲೋಗೋ ಹಾಕದೆ ನೈಜ ವಿಡಿಯೊಗಳನ್ನು ಹಾಕುವವರಿಗೆ ತೊಂದರೆಯಿಲ್ಲ.
ಆದರೆ, ಯುಟ್ಯೂಬ್‌ನಿಂದಾಗಿ ಆದಾಯ ಬರುವ ಸಂದಭದಲ್ಲಿ ಅಕೌಂಟ್ ಸಂಖ್ಯೆ, ಪ್ಯಾನ್‌ಕಾರ್ಡ್ ಇರುವುದು ಅನಿವಾರ್ಯವಾಗುತ್ತದೆ.ಸರಕಾರದ ಸೂಚನೆ ಅನ್ವಯ ಜಿಲ್ಲೆಯಲ್ಲಿ ಯುಟ್ಯೂಬ್ ಚಾನೆಲ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಜತೆಗೆ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತಿರುವ ವಿಷಯಗಳ ಬಗ್ಗೆಯೂ ಪರಿಶೀಲಿಸುತ್ತಿದ್ದು, ಸಾರ್ವಜನಿಕರ ಶಾಂತಿ ಭಂಗ ಬರುವಂತಹ ಹಾಗೂ ಖಾಸಗಿತನಕ್ಕೆ ಧಕ್ಕೆಯಾಗುವಂತಹ ವರದಿಗಳು ಪ್ರಸಾರವಾಗಿದ್ದರೆ ಶೋಕಾಸ್ ನೋಟಿಸ್ ನೀಡಲಾಗುತ್ತದೆ.