
ಕೆಲಸ ಕೊಡಿಸುವುದಾಗಿ ನಂಬಿಸಿ ಸಾವಿರಾರು ನಿರುದ್ಯೋಗಿಗಳಿಗೆ ವಂಚಿಸಿದ್ದ ಇಬ್ಬರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿನಗರದ ರಘು ಅಲಿಯಾಸ್ ನವನೀತ್(27) ಮತ್ತು ಗಾಯತ್ರಿನಗರದ ಸಾಯಿಕಿರಣ್(25) ಬಂಧಿತ ವಂಚಕರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್‍ಗಳು, 2 ಸಿಪಿಯು, 1 ಲ್ಯಾಪ್‍ಟಾಪ್ ಹಾಗೂ 43 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.ಅಲ್ಕಾನ್ ಲಾಬೊರೆಟೋರಿಸ್ ಇಂಡಿಯಾ ಪ್ರೈ.ಲಿ., ಎಂಬ ಕಂಪನಿಯ ಹೆಸರನ್ನು ಬಳಸಿಕೊಂಡು ಅಪರಿಚಿತ ಯುವತಿಯರು ಕಳೆದ ಡಿಸೆಂಬರ್ 23ರಿಂದ 29ರವರೆಗೆ ಪಿರ್ಯಾದುದಾರರಿಗೆ ಮೊಬೈಲ್‍ನಲ್ಲಿ ಕರೆ ಮಾಡಿ ತಾವು ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ.
ನಿರುದ್ಯೋಗಿಗಳಿಗೆ ಅಲ್ಕಾನ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇ ವೆಂದು ನಂಬಿಸಿ ನಕಲಿ ಈಮೇಲ್ ಸೃಷ್ಟಿಸಿಕೊಂಡು ಆ ಕಂಪನಿಯ ಲೋಗೋವನ್ನು ಪ್ರೊಫೈಲ್‍ನಲ್ಲಿ ಅಳವಡಿಸಿಕೊಂಡು ನಂಬಿಕೆ ಬರುವಂತೆ ಮಾಡಿದ್ದಾರೆ. ಇವರ ಮಾತನ್ನು ನಂಬಿದ ನಿರುದ್ಯೋಗಿಗಳಿಗೆ ಸಂದರ್ಶನ ಮತ್ತು ಪರೀಕ್ಷೆಗಳನ್ನು ಸಹ ನಡೆಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಕೊಂಡಿಕೊಂಡು ವಂಚಿಸುತ್ತಿದ್ದರು.
ಈ ಬಗ್ಗೆ ಪಿರ್ಯಾದುದಾರರು ಫೆ.23ರಂದು ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸುಮಾರು ಮೂರು ವರ್ಷಗಳಿಂದ ವಿವಿಧ ಕಂಪನಿಗಳ ಹೆಸರಿನಲ್ಲಿ ಕಚೇರಿಗಳನ್ನು ತೆರೆದು ಎಚ್‍ಆರ್ ಕೆಲಸ ಖಾಲಿ ಇದೆ ಎಂದು ಜಾಬ್ ವೆಬ್‍ಸೈಟ್ ಪೋರ್ಟಲ್‍ಗಳಲ್ಲಿ ಜಾಹಿರಾತು ನೀಡಿ ಕಚೇರಿಗೆ ಬರುವ ನಿರುದ್ಯೋಗಿಗಳ ಪೈಕಿ ಯುವತಿಯರನ್ನೇ ಆಯ್ಕೆ ಮಾಡಿ ಎಚ್‍ಆರ್ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು.
ತಾವುಗಳು ಹೇಳಿದಂತೆ ಫೋನ್ ಕರೆ ಮಾಡಿ ಹಣವನ್ನು ತಾವು ನೀಡಿದ ಬ್ಯಾಂಕ್ ಖಾತೆಗಳಿಗೆ ಹಾಕಿಸುವಂತೆ ವಂಚಕರು ತಿಳಿಸುತ್ತಿದ್ದರು. ನಂತರ ನಿರುದ್ಯೋಗಿಗಳ ವಿವರಗಳನ್ನು ಜಾಬ್ ವೆಬ್‍ಸೈಟ್ ಪೋರ್ಟಲ್‍ಗಳಲ್ಲಿ ಪಡೆದು ಈ ಯುವತಿಯರಿಗೆ ಅವುಗಳನ್ನು ನೀಡಿ ಅವರ ಮೂಲಕ ಕರೆ ಮಾಡಿಸಿ ಮೊದಲಿಗೆ ಅಪ್ಲಿಕೇಷನ್ ಶುಲ್ಕವೆಂದು 250 ರೂ. ಪಡೆದುಕೊಳ್ಳುತ್ತಿದ್ದರು.
ಹಣ ನೀಡಿದವರಿಗೆ ಪುನಃ ಕರೆ ಮಾಡಿ ನೀವು ಮೊದಲನೇ ಸುತ್ತು ಸಂದರ್ಶನಕ್ಕೆ ಆಯ್ಕೆಯಾಗಿದ್ದೀರಾ ಎಂದು ನಂಬಿಸಿ ಸಂದರ್ಶನದ ಶುಲ್ಕವೆಂದು 2500 ರೂ.ಗಳನ್ನು ಪಡೆದುಕೊಂಡಿದ್ದರು. ಹಣ ನೀಡಿದ ನಿರುದ್ಯೋಗಿಗಳಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿ 2ನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದೀರ ಎಂದು ತಿಳಿಸಿ 7500 ರೂ.ಗಳನ್ನು ಶುಲ್ಕ ಪಡೆದುಕೊಂಡಿದ್ದಾರೆ.
ಆರೋಪಿಗಳು ತಮ್ಮ ಖಾತೆಗೆ ಹಣ ಜಮೆ ಮಾಡಿಸಿಕೊಂಡು ನಂತರ ನಿರುದ್ಯೋಗಿಗಳಿಗೆ ಯಾವುದೇ ಕೆಲಸವನ್ನು ಕೊಡಿಸದೆ ಮೋಸ ಮಾಡುತ್ತಿದುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಎಚ್‍ಆರ್ ಕೆಲಸಕ್ಕೆ ಸೇರಿಸಿಕೊಂಡಿದ್ದ ಯುವತಿಯರಿಗೆ ತಮ್ಮ ವಂಚನೆ ಗೊತ್ತಾಗುವ ಮುನ್ನವೇ ಒಂದೆರಡು ತಿಂಗಳು ಕೆಲಸ ಮಾಡಿಸಿಕೊಂಡು ಅವರಿಗೆ ಸಂಬಳವನ್ನು ಕೊಡದೆ ವಿನಾಕಾರಣ ತೆಗೆದು ಹಾಕುತ್ತಿದ್ದರು.
ಆರೋಪಿಗಳು ಕರ್ನಾಟಕ ರಾಜ್ಯದ ಸಾವಿರಾರು ನಿರುದ್ಯೋಗಿಗಳಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಈಗಾಗಲೇ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ, ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ ಹಾಗೂ ಸುಬ್ರಹ್ಮಣ್ಯನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.ಈ ಕಾರ್ಯಾಚರಣೆಯನ್ನು ಇನ್‍ಸ್ಪೆಕ್ಟರ್ ಸಂತೋಷ್‍ರಾಮ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡು ವಂಚಕರನ್ನುಬಲೆಗೆ ಬೀಳಿಸುವಲ್ಲಿ ಯಶಸ್ವಿ ಯಾಗಿದೆ.