
ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಕಂಪನಿಗಳ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದು, ಲಕ್ಷಾಂತರ ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.
ಕೋಲಾರ ಹಾಗೂ ಮಾಲೂರು ತಾಲೂಕಿನಲ್ಲಿ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಒಂದು ದಿನದ ಕಾರ್ಯಾಗಾರ ನಡೆಸುತ್ತಿದ್ದ ಕಂಪನಿಯವರು, ಯುವಕರಿಗೆ ಕಡಿಮೆ ಅವಧಿಯಲ್ಲಿ ಚೈನ್‌ಲಿಂಕ್ ಮೂಲಕ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ನಿಮ್ಮ ಕಾಲ ಮೇಲೆ ನಾವು ನಿಲ್ಲಬಹುದೆಂದು ಭರವಸೆಗಳನ್ನು ನೀಡುತ್ತಿದ್ದರು.
ಇದರೊಂದಿಗೆ ಉತ್ತಮ ಆದಾಯ ಬರುವ ಕೆಲಸವನ್ನು ಕೊಡಿಸುತ್ತೇವೆಂದು ಯುವಕರನ್ನು ನಂಬಿಸಿ ಒಬ್ಬರಿಂದ 35 – 40 ಸಾವಿರ ರೂ.ಗಳನ್ನು ಪಡೆಯುತ್ತಿದ್ದ ಕಂಪನಿಗಳು ಮೂರು ಜನರನ್ನು ಕಂಪನಿಗೆ ಸೇರಿಸುವುದಾಗಿ ತಿಳಿಸುತ್ತಿದ್ದರು.
ಜತೆಗೆ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಯುವಕರಿಗೆ ಕೊಟ್ಟು ಮಾರಾಟ ಮಾಡಿ ಲಾಭ ಮಾಡಿಕೊಳ್ಳಿ ಎಂದು ಹೇಳುತ್ತಿದ್ದರು.
ಇದರಿಂದ ಬೇಸತ್ತ ಯುವಕರು ತಮಗೆ ಯಾವುದೇ ಕೆಲಸ ಬೇಡ ತಮ್ಮ ಹಣವನ್ನು ತಮಗೆ ವಾಪಸ್ ಕೊಡಿ ಎಂದು ಹೇಳಿದರೆ ಬೇರೆ ಯುವಕರನ್ನು ಅವರ ಮೇಲೆ ಎತ್ತ ಕಟ್ಟಿ ಗಲಾಟೆ ಮಾಡಿಸುತ್ತಿದ್ದರು.
ಆ ಹಿನ್ನೆಲೆಯಲ್ಲಿ ಹಲವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮೂರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಂಟು ಮಂದಿ ವಶಕ್ಕೆ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಮಾಡರ್ನ್ ಸೋಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯಸ್ಥಾಪಕ ನಿರ್ದೇಶಕ ರಾಹುಲ್ ಠಾಕುರ್, ಗಂಗರಾಜು, ಕೃಷ್ಣ, ಮಾರುತಿ ಹಾಗೂ ಜ್ಯೋತಿ ಎಂಬುವರನ್ನು ವಶಕ್ಕೆ ಪಡೆದಿದ್ದು,
ಖುಷಿ ಸಂಪದ ಸಂಸ್ಥೆಯ ಎಂಡಿ ನಟರಾಜ್ ಬಿ. ಒಡೆಯರ್, ಮಧು ಕಿರಣ್, ವರಲಕ್ಷ್ಮಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಖುಷಿ ಸಂಪದ ಕಂಪನಿಯಲ್ಲಿದ್ದ 5 ಲಕ್ಷ ರೂ. ಹಾಗೂ ಉಳಿದ ಎರಡು ಕಂಪನಿಗಳ ಖಾತೆಯಲ್ಲಿರುವ 17 ಲಕ್ಷಕ್ಕೂ ಹೆಚ್ಚಿನ ಹಣವನ್ನು ಪೊಲೀಸರು ಜಪ್ತಿ ಮಾಡಿಸಿದ್ದಾರೆ.
ಮನೆ ಬಿಟ್ಟಿರುವ ಯುವಕರು ಕಂಪನಿಗೆ ಹಣ ಪಾವತಿಸಲು ಸ್ನೇಹಿತರು, ಪೋಷಕರು ಹಾಗೂ ನೆರೆಯವರಿಂದ ಸಾಲ ಪಡೆದಿದ್ದ ಯುವಕರಿಗೆ ಹಣ ಮರಳಿ ಬರದ ಹಿನ್ನೆಲೆಯಲ್ಲಿ ಕೆಲವು ಯುವಕರು ಮನೆಯಲ್ಲಿ ಮರ್ಯಾದೆ ಹೋಗುತ್ತದೆ, ಪೋಷಕರು ಹೊಡೆಯುತ್ತಾರೆಂಬ ಭಯದಿಂದ ಮನೆ ಬಿಟ್ಟಿರುವ ಘಟನೆಗಳು ನಡೆದಿವೆ.
ಬಡ್ಸ್ ಕಾಯ್ದೆಯಡಿ ಪ್ರಕರಣನಿರುದ್ಯೋಗ ಯುವಕರಿಗೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಕೆಲ ಕಂಪನಿಗಳ ವಿರುದ್ಧ ಅನಿಯಂತ್ರಿತ ಹಣ ಠೇವಣೆ ಯೋಜನೆಗಳ ನಿಷೇಧ (ಬಿಯುಡಿಎಸ್) ಕಾಯ್ದೆಯಡಿ 420 ಕೇಸ್ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದ್ದು,
ಈಗಾಗಲೇ ಕಂಪನಿಯ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಹೇಳಿದ್ದಾರೆ.