ಅಪರಾಧರಾಜ್ಯ

ಯುವಕನಿಗೆ ಬಲವಂತದಿಂದ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ ಆರೋಪ: 11 ಮಂದಿ ವಿರುದ್ಧ ಎಫ್‌ಐಆರ್

ಹುಬ್ಬಳ್ಳಿ: ಯುವಕನೊಬ್ಬನನ್ನು ಒತ್ತಾಯ ಪೂರ್ವಕವಾಗಿ ಖತ್ನಾ (ಮುಂಜಿ) ಮಾಡಿಸಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ ಆರೋಪ ಕೇಳಿಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಹುಬ್ಬಳ್ಳಿ ನವನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕು ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬಾತನೇ ಒತ್ತಾಯಪೂರ್ವಕ ಮತಾಂತರಕ್ಕೊಳಗಾದ ಯುವಕ.

ಮತಾಂತರ ನಂತರ ಈತನಿಗೆ ಮಹ್ಮದ್‌ ಸಲ್ಮಾನ್ ಎಂದು ನಾಮಕರಣ ಮಾಡಲಾಗಿದೆ.

ಮಂಡ್ಯ ಮದ್ದೂರ ತಾಲೂಕು ಕೊಪ್ಪ ಗ್ರಾಮದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ, ಮಹ್ಮದ್ ಇಕ್ಬಾಲ್, ರಫಿಕ್, ಶಬ್ಬೀರ್, ಖಾಲಿದ್, ಶಾಕಿಲ್ ಮತ್ತು ಅಲ್ತಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶ್ರೀಧರ ಗಂಗಾಧರ ಎಂಬಾತ ಖಾಸಗಿ ಕಂಪನಿಯೊಂದರಲ್ಲಿನ ನೌಕರ. ಈತನಿಗೆ ಹಣಕಾಸಿನ ತೊಂದರೆ ಇತ್ತು. ಈ ವಿಷಯವನ್ನು ಆರೋಪಿ ಅತ್ತಾವರ ರೆಹಮಾನ್‌ಗೆ ತಿಳಿಸಿದ್ದಾನೆ.

ಹಣಕಾಸಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದನು. ಅದರಂತೆ ಆರೋಪಿಯು ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದಕ್ಕೆ ಕರೆಯೊಯ್ದು ಅಲ್ಲಿನವರಿಗೆ ಪರಿಚಯಿಸಿದ್ದಾನೆ.

ಈ ವೇಳೆ ಆತನನ್ನು ಮಸೀದಿಯಲ್ಲೇ ಬಲವಂತವಾಗಿ ಇಟ್ಟುಕೊಂಡ ಆರೋಪಿಗಳು ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನಪರಿವರ್ತನೆ ಮಾಡಿ, ಮರ್ಮಾಂಗದ ತುದಿ ಕತ್ತರಿಸಿ ಖತ್ನಾ ಮಾಡಿದ್ದಾರೆ.

ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿ ತಿನ್ನಿಸಿದ್ದಾರೆ. ಮತಾಂತರದ ಬಗ್ಗೆ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಕೂಡ ಪಡೆದಿದ್ದಾರೆ ಎಂದು ಶ್ರೀಧರ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಖತ್ನಾ ಆದ ಬಳಿಕ ತಿರುಪತಿ, ಆಂಧ್ರದ ಪುತ್ತೂರ, ಭುವನಗರ ಸೇರಿದಂತೆ ವಿವಿಧ ಪ್ರದೇಶಗಳ ಮಸೀದಿಗಳಿಗೆಲ್ಲ ಕರೆದುಕೊಂಡು ಇಸ್ಲಾಂ ಧರ್ಮದ ತರಬೇತಿ ನೀಡಿದ್ದಾರೆ. ಪ್ರಾರ್ಥನೆ ಹಾಗೂ ಇತರೆ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ.

ಪ್ರಾರ್ಥನೆಯನ್ನೂ ಮಾಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರತಿವರ್ಷ ಮೂವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಬೇಕೆಂದು ಆರೋಪಿಗಳು ಬೆದರಿಸಿದ್ದಾರೆ.

ನನ್ನ ಕೈಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದುಕೊಂಡಿದ್ದಲ್ಲದೇ ವಿಡಿಯೋ ಮಾಡಿದ್ದಾರೆ. ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯೋತ್ಪಾದಕನೆಂದು ಬೆಂಬಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀಧರ ಖಾತೆಗೆ 35 ಸಾವಿರ ರೂ. ಹಣ ವರ್ಗಾಯಿಸಿ ತಾವು ಹೇಳಿದಂತೆ ಕೇಳಬೇಕು. ಪ್ರತಿವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ನಡುವೆ ಶ್ರೀಧರ್‌ಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗುತ್ತದೆ. ಆ ಯುವತಿಯ ಜತೆಗೆ ಚಾಟಿಂಗ್ ನಡೆಯುತ್ತದೆ.

ಯುವತಿಯೂ ಶ್ರೀಧರನಿಗೆ ಹುಬ್ಬಳ್ಳಿಗೆ ಬರುವಂತೆ ಕರೆದಿದ್ದಾಳೆ. ಅದರಂತೆ ಸೆ.18ರಂದು ಶ್ರೀಧರ ನಗರಕ್ಕೆ ಬಂದಿದ್ದಾರೆ. ಇಲ್ಲೇ ಎರಡ್ಮೂರು ದಿನ ಕಳೆದಿದ್ದಾನೆ.

ಸೆ.21ರಂದು ರಾತ್ರಿ ವೇಳೆ ಇಲ್ಲಿನ ಭೈರಿದೇವರ ಕೊಪ್ಪದಲ್ಲಿ ಅಡ್ಡಾಡುತ್ತಿದ್ದಾಗ ಅಪರಿಚಿತರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಈತ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಕಿಮ್ಸ್‌ನಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಹಿಂದಿನ ಘಟನೆಯೆಲ್ಲ ಬಿಚ್ಚಿಟ್ಟಿದ್ದಾನೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button