ಯಶಸ್ವಿನಿ ೩೦ ಕೋಟಿ ಸದಸ್ಯರ ನೋಂದಣಿ ಗುರಿ

ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿದ್ದು, ಅದರಂತೆ ಇದೇ ತಿಂಗಳ ೩೧ ರೊಳಗೆ ಬರೋಬ್ಬರಿ ೩೦ ಕೋಟಿ ಸದಸ್ಯರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇಂದು ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸಿ.ಎನ್.ಮಂಜೇಗೌಡ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.ಮುಖ್ಯಮಂತ್ರಿಗಳು ೨೦೨೨-೨೩ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ ೧ ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ.
ಸದ್ಯ ಡಿ.೩೧ರೊಳಗೆ ೩೦ ಲಕ್ಷ ಮಂದಿಯ ನೋಂದಣಿ ಆಗಲಿದೆ. ಒಂದು ವೇಳೆ ಆಗದೆ, ಇದ್ದಲ್ಲಿ ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.ಅಲ್ಲದೆ,ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ ೫ ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.
ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ ೩೦೦ ಕೋಟಿ ರೂ. ಅನುದಾನ ನಿಗದಿ ಪಡಿಸಿದೆ ಎಂದು ವಿವರಿಸಿದರು.ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ ೫೦೦ ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ ೧೦೦೦ ರೂ. ವಂತಿಗೆ ನಿಗದಿ ಪಡಿಸಲಾಗಿದೆ.
ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ ೨೦೦ ರೂ. ವಂತಿಗೆ ಪಾವತಿಸಿ, ನೊಂದಾಯಿಸಬಹುದು ಎಂದರು.ಇದಕ್ಕೂ ಮುನ್ನ ಸಿ.ಎನ್.ಮಂಜೇಗೌಡ ಪ್ರಸ್ತಾಪಿಸಿ, ಯಶಸ್ವಿನಿ ಯೋಜನೆಯೂ ಸೈನಿಕರಿಗೂ ಮೀಸಲಿಡಬೇಕು. ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.