ಮೋದಿ ಭೇಟಿ ವೇಳೆ ಕಳಪೆ ರಸ್ತೆ ಕಾಮಗಾರಿ, ಬಿಜೆಪಿಗೆ ಮೇಲೆ ಕಾಂಗ್ರೆಸ್ ಟ್ವೀಟ್ ಅಟ್ಯಾಕ್
PMO seeks report after Bengaluru road caves

ಪ್ರಧಾನಿ ಭೇಟಿ ವೇಳೆ ತೇಪೆ ಹಚ್ಚಿದ ರಸ್ತೆಗಳ ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಾರ್ಯಾಲಯ ರಾಜ್ಯ ಸರ್ಕಾರಕ್ಕೆ ವರದಿ ಕೇಳಿದ್ದು ನಾಚಿಕೆಗೇಡಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಭಾಷಣದಲ್ಲಿ ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಭಯಂಕರ ಹೊಗಳಿಕೊಂಡಿದ್ದ ಪ್ರಧಾನಿಗೆ ಈಗ ಉತ್ತರ ಸಿಕ್ಕಿರಬಹುದು.
ಪ್ರಧಾನಿಗಳೇ, ಇದೇ ನಿಮ್ಮ ಅಸಲಿ ಅಚ್ಛೆ ದಿನಗಳು, ಅರಿವಾಯಿತೆ? ಎಂದು ಲೇವಡಿ ಮಾಡಿದೆ.ಇತ್ತೀಚೆಗೆ ಪ್ರಧಾನಿ ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಿದ್ದರು. ಆವರೆಗೂ ಹಳ್ಳದಿಣ್ಣೆಗಳಾಗಿದ್ದ ರಸ್ತೆಗಳನ್ನು ತಾರಾತುರಿಯಲ್ಲಿ ರಿಪೇರಿ ಮಾಡಲಾಯಿತು.
ಪ್ರಧಾನಿ ಭೇಟಿ ನೀಡುವ ಹಿಂದಿನ ದಿನ ದುರಸ್ಥಿಯಾದ ರಸ್ತೆಗಳು ಪ್ರಧಾನಿ ವಾಪಾಸ್ಸಾದ ಮಾರನೇಯ ದಿನದಿಂದಲೇ ಕಿತ್ತು ಹೋಗಲಾರಂಭಿಸಿದವು. ಕಾಮಗಾರಿಯ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಹೈಕೋರ್ಟ್ ಕೂಡ ತರಾಟೆ ತೆಗೆದುಕೊಂಡಿದ್ದು, ರಸ್ತೆ ಸುಧಾರಣೆ ಸೇರಿ ಜನರಿಗೆ ಸೌಲಭ್ಯಗಳು ಸಿಗಬೇಕು ಎಂದಾದರೆ ಪ್ರಧಾನಿ ಅವರು ಪದೇ ಪದೇ ಬೆಂಗಳೂರಿಗೆ ಬಂದು ಹೋಗಬೇಕೆ ಎಂದು ಕಿಡಿಕಾರಿತ್ತು.ರಸ್ತೆ ಕಾಮಗಾರಿ ಗುಣಮಟ್ಟ ಕಳಪೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷಾತೀತವಾಗಿ ಟೀಕೆಗಳು ಕೇಳಿ ಬರುತ್ತಿವೆ.
ಈಗ ಪ್ರಧಾನಿ ಕಾರ್ಯಾಲಯ ಕೂಡ ವಿವರಣೆ ಕೇಳಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವುದು ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.