ಮೋದಿ ಪ್ರಯಾಣಿಸುವ ಮಾರ್ಗದ ಕಾಲೇಜುಗಳಿಗೆ ರಜೆ ಏಕೆ..? : ಡಿಕೆಶಿ ಪ್ರಶ್ನೆ
holiday for colleges in proximity of PM's route DK Shivakumar

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ಮಾರ್ಗದಲ್ಲಿರುವ ಕಾಲೇಜುಗಳಿಗೆ ರಜೆ ನೀಡುವ ಮೂಲಕ ಸರ್ಕಾರ ವಿದ್ಯಾರ್ಥಿ ಹಾಗೂ ಯುವ ಸಮುದಾಯವನ್ನು ಅನುಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಬರುತ್ತಿದ್ದರು, ಹೋಗುತ್ತಿದ್ದರು ನಮ್ಮ ವಿದ್ಯಾರ್ಥಿಗಳು ಅವರಿಗೆ ಯಾವುದೇ ತೊಂದರೆ ಮಾಡುತ್ತಿರಲಿಲ್ಲ, ಅದಾಗ್ಯು ರಜೆ ನೀಡಿರುವುದೇಕೆ? ಎಂದು ಕಿಡಿಕಾರಿದ್ದಾರೆ.
ಅಗ್ನಿಪಥ್ ಯೋಜನೆಯಲ್ಲಿ ತಪ್ಪುಗಳಿವೆ ಎಂದು ಈ ಮೂಲಕ ಸರ್ಕಾರ ಒಪ್ಪಿಕೊಂಡಂತಾಗಿದೆ. ನಾಲ್ಕು ವರ್ಷ ಸೇನೆಯಲ್ಲಿ ಕೆಲಸ ಮಾಡಿ ಹೊರ ಬಂದ ಬಳಿಕ ಸೆಕ್ಯುರಿಟಿ ಗಾರ್ಡ್‍ಗಳು, ಅಗ್ನಿಶಾಮಕದಳದಂತಹ ಉದ್ಯೋಗಗಳನ್ನು ಮಾಡಲು ಅವಕಾಶವಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ, ಈವರೆಗೂ ನಮ್ಮ ಸರ್ಕಾರ ಯುವಕರಿಗೆ ಉದ್ಯೋಗ ನೀಡಿ ಸಬಲೀಕರಣ ಮಾಡಿದೆ. ಆದರೆ ಬಿಜೆಪಿ ಅವರನ್ನು ಸೆಕ್ಯುರಿಟಿ ಗಾರ್ಡ್‍ಗಳನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು, ಶಾಸಕರ ಮಕ್ಕಳು ಇಂಜಿನಿಯರ್, ಡಾಕ್ಟರ್, ಪ್ರೊಫೆಸರ್‍ಗಳಾಗಬೇಕು, ಬಡವರ ಮಕ್ಕಳು ಸೆಕ್ಯುರಿಟಿ ಗಾರ್ಡ್‍ಗಳಾಗಬೇಕೆ? ಯಾರೇ ಆದರೂ ಇಂತಹ ತಾರತಮ್ಯ ಮಾಡಬಾರದು ಎಂದು ಹೇಳಿದರು. ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿಗೆ ಬಂದಾಗ ರಾಜ್ಯ ಸರ್ಕಾರದ ಶೇ. 40ರಷ್ಟು ಕಮೀಷನ್‍ನ ಹಗರಣಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೈಚಾರಿಕ ಸಂತ ನಾರಾಯಣಗುರು, ನಡೆದಾಡುವ ದೇವರೆಂದೇ ಖ್ಯಾತರಾದ ಡಾ.ಶಿವಕುಮಾರಸ್ವಾಮೀಜಿ, ಡಾ.ಬಾಲಗಂಗಾಧರನಾಥಸ್ವಾಮೀಜಿ ಸೇರಿದಂತೆ ಅನೇಕರಿಗೆ ಅಪಮಾನವಾಗಿದೆ,
ಇದನ್ನು ಮಠಾೀಶರು ಮತ್ತು ಸಮುದಾಯ ಆಧಾರಿತ ಸಂಘಟನೆಗಳು ಖಂಡಿಸಬೇಕು, ಸರ್ಕಾರಕ್ಕೆ ಹೆದರಿ ಮೌನವಾಗಿರಬಾರದು, ರಾಜಕೀಯವಾಗಿ ಅವರು ಬೆಂಬಲ ನೀಡುವ ಅಗತ್ಯವಿಲ್ಲ ಆದರೆ ಧರ್ಮ, ಸಂಸ್ಕøತಿಗೆ ಅಪಮಾನವಾದಾಗ ಸುಮ್ಮನಿರಬಾರದು ಎಂದು ಹೇಳಿದರು.ಕೆಲವು ಮಠಾೀಶರು ಹೇಳಿಕೆ ನೀಡಿ, ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ, ಅವರ ಪ್ರತಿರೋಧ ಇಷ್ಟಕ್ಕೆ ಸೀಮಿತವಾಗಬಾರದು, ದಾರ್ಶನಿಕರು, ಮಹಾತ್ಮರು, ಗಣ್ಯರಿಗೆ ಅಪಮಾನವಾದಾಗ ಮಠಗಳು, ಸಮುದಾಯದ ಸಂಘಟನೆಗಳು ದನಿ ಎತ್ತಲೇಬೇಕು, ಹೋರಾಟಕ್ಕೆ ಕೈ ಜೋಡಿಸಬೇಕೆಂದು ಹೇಳಿದರು.ಕನ್ನಡ ಸಂಘಟನೆಗಳು ನಿನ್ನೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದನ್ನು ಅವರು ಸ್ಮರಿಸಿಕೊಂಡರು.