ರಾಜಕೀಯ

ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಚ ಮಾಡಿ “: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಎಸಿಬಿ ರದ್ದು ಮಾಡಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಕುರಿ ಕಾಯುವುದಕ್ಕೆ ತೋಳ ಬಿಡುತ್ತಾರೆ ಎನ್ನುತ್ತಾರಲ್ಲ ಹಾಗೆ ಇದು. ಲೋಕಾಯುಕ್ತದಿಂದ ಶುದ್ಧ ಆಗುತ್ತದೆ ಎಂದು ಭಾವಿಸಿಲ್ಲ.

ಮೊದಲು ವಿಧಾನಸೌಧದ ಮೂರನೇ ಮಹಡಿ ಶುದ್ಧವಾಗಬೇಕು ಎಂದು ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಕಾಂಗ್ರೆಸ್ ಸರಕಾರದ ಕಾಲದಲ್ಲಿ ಎಸಿಬಿ ರಚನೆ ಮಾಡಲಾಗಿತ್ತು.

ಆ ಸರಕಾರದ ವಿರುದ್ಧ ಬಂದಿದ್ದ ಅನೇಕ‌ ಆರೋಪಗಳನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಸಿಬಿ ರಚನೆಯಾಗಿತ್ತು.ವಿಧಾನ ಮಂಡಲದಲ್ಲಿ ಕಾಯಿದೆ ತಂದು ಎಸಿಬಿಯನ್ನು ರಚನೆ ಮಾಡಿದ್ದಲ್ಲ ಅದು.

ಆ ಸರಕಾರ ಮುಖಭಂಗದಿಂದ ಪಾರಾಗಲು ಎಸಿಬಿ ರಚನೆ ಮಾಡಿತ್ತು ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ತರಾತುರಿಯಲ್ಲಿ ಮಾಡಿದ ಆಗಿನ ಲೋಪದೋಷ ಮುಚ್ಚಿಕೊಳ್ಳಲು ಮಾಡಿದ ತನಿಖಾ ಸಂಸ್ಥೆಯೇ ಎಸಿಬಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಮತ್ತೊಬ್ಬರ ಮರ್ಜಿನಲ್ಲಿ ಇದ್ದೆ.

ಹೀಗಾಗಿ ಎಸಿಬಿಯನ್ನು ರದ್ದು ಮಾಡಲು ನನ್ನಿಂದ ಆಗಲಿಲ್ಲ. ನನ್ನ ಸರಕಾರ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿಯು ಏಸಿಬಿಯನ್ನು ರದ್ದು ಮಾಡಲು ಮೂರು ವರ್ಷಗಳಿಂದ ಆಸಕ್ತಿಯನ್ನೆ ತೋರಲಿಲ್ಲ. ಈಗ ರಾಜ್ಯ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸುವ ಆದೇಶ ಮಾಡಿದೆ.

ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ ಎಂದರು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ:ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದಕ್ಕೆ ಒಂದು ಉದಾಹರಣೆ ನೀಡುವುದಾದರೆ, ಇಂದು ರಾಮನಗರದ ಒಂದು ಹಳ್ಳಿಯ ಮಹಿಳೆಯರು ನನ್ನನ್ನು ತಡೆದರು.

ಅಲ್ಲಿನ ಮಹಿಳಾ ಹಾಲು ಉತ್ಪಾದಕರ ಸಂಘದಲ್ಲಿ 8 ಲಕ್ಷ ರೂ. ಹಣ ಲೂಟಿ ಮಾಡಿದ ಕಾರ್ಯದರ್ಶಿ ಬಗ್ಗೆ ಅವರು ದೂರು ಹೇಳಿದರು. ಹಣ ದುರುಪಯೋಗ ಮಾಡಿಕೊಂಡ ಆ ವ್ಯಕ್ತಿಯನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಮತ್ತೆ 24 ಗಂಟೆಗಳಲ್ಲಿ ಆ ವ್ಯಕ್ತಿ ಅದೇ ಜಾಗಕ್ಕೆ ವಾಪಸ್ ಬಂದಿದ್ದಾರೆ.

ಈ ರಾಜ್ಯದಲ್ಲಿ ಲೂಟಿ ಹೊಡೆಯುವವರಿಗೆ ಸಂಪೂರ್ಣ ರಕ್ಷಣೆ ನೀಡಲಾಗುತ್ತಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದರು.ನಾನು ಯಾವ ದಾಖಲೆಗಳನ್ನು ಬೇಕಾದರೂ ನೀಡಬಲ್ಲೆ. ಆದರೆ ಏನು ಪ್ರಯೋಜನ? ಎಸಿಬಿಯ ಭ್ರಷ್ಟಾಚಾರದ ಪವರ್ ಪಾಯಿಂಟ್ ಆಗಿತ್ತು.

ಭ್ರಷ್ಟಾಚಾರದ ತಡೆಯುವುದು ಅದರಿಂದ ಸಾಧ್ಯ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.2008ರ ಬಿಜೆಪಿ ಸರಕಾರದಲ್ಲಿ ನಡೆದ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಪಕ್ಷ ಜೆಡಿಎಸ್ ಮಾತ್ರ. ‌

ಅಂದಿನ ಬಿಜೆಪಿ ಸರಕಾರದ ಲಂಚಾವತಾರದ ಬಗ್ಗೆ ಸರಣಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದೆವು. ನಮ್ಮ ದೇಶದಲ್ಲಿ ಭ್ರಷ್ಟ ವ್ಯವಸ್ಥೆ ತಡೆಯಲು ಸಂಸ್ಥೆಗಳು ಇದ್ದರೂ, ಲೂಟಿಕೋರರಿಗೆ ಯಾರು ಯಾವ ರೀತಿ ರಕ್ಷಣೆ ಕೊಟ್ಟಿದ್ದಾರೆ ಅಂತ ಗೊತ್ತಿದೆ.

ನಾನು ಮತ್ತೆ ಕೆದಕಲು ಹೋಗಲ್ಲ. ನನಗೆ ಲೋಕಾಯುಕ್ತ ಸೇರಿ ಮತ್ಯಾವ ಸಂಸ್ಥೆಗಳು ಮುಖ್ಯ ಅಲ್ಲ. ಭ್ರಷ್ಟಾಚಾರ ತೊಲಗಬೇಕು ಎಂದು ಅವರು ಹೇಳಿದರು.ವೈದ್ಯಕೀಯ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಭ್ರಷ್ಟಾಚಾರ:ಮೆಡಿಕಲ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಲಂಚ ತಾಂಡವಾಡುತ್ತಿದೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಆರೋಪ ಮಾಡಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ನೇಮಕ ಮಾಡಲು ಸರಕಾರ ಹೊರಟಿದ್ದು, ಈ ನೇಮಕ ಹೇಗಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಂದು ಹುದೆಗೆ ಎರಡು ವರ್ಷದ ಸಂಬಳವನ್ನು ಲಂಚದ ರೂಪದಲ್ಲಿ ಕೊಡಬೇಕಿದೆ. ಕಡಿಮೆ ಎಂದರೂ 25 ಲಕ್ಷ ರೂಪಾಯಿ ಕೊಡಬೇಕು. ಎಗ್ಗಿಲ್ಲದೆ ಆ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ.

ಹಾಗೆ ನೇಮಕ ಆಗಿ ಬರುವವರು ಸರಿಯಾಗಿ ಕೆಲಸ ಮಾಡುತ್ತಾರೆಯೇ? ಸಿ ಹಾಗೂ ಡಿ ಗ್ರೂಪ್ ನೌಕರರು ನೇಮಕ ಆಗಲು ನಾಲ್ಕು ವರ್ಷಗಳ ಸಂಬಳವನ್ನು ಲಂಚವಾಗಿ ಇಡಬೇಕಾಗಿದೆ ಎಂದು ಕುಮಾರಸ್ವಾಮಿ ಆವರು ಹೇಳಿದರು.

ಸಹಕಾರಿ ಇಲಾಖೆಯಲ್ಲೂ ಭಾರೀ ಕರ್ಮಕಾಂಡ ನಡೆಯುತ್ತಿದೆ. ಜಿಲ್ಲಾ ರಿಜಿಸ್ಟ್ರಾರ್ ಗಳು (ಡಿಆರ್) ಹಾಗೂ ಸಹಾಯಕ ರಿಜಿಸ್ಟ್ರಾರ್ ಗಳ (ಎಅರ್) ಅಕ್ರಮಗಳು ಮೇರೆ ಮೀರಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಇದನ್ನು ತನಿಖೆ ಮಾಡಿಸಲಾಗುವುದು ಎಂದರು ಮಾಜಿ ಮುಖ್ಯಮಂತ್ರಿಗಳು.

ಕೃಷಿ ಉಪಕರಣಕ್ಕೆ ಸಬ್ಸಿಡಿಗೂ ಪರ್ಸೆಂಟೇಜ್:ಕೃಷಿ ಉಪಕರಣಕ್ಕೆ ಸಬ್ಸಿಡಿ ಕೊಡಲು ಎಂಟು ಪರ್ಸೆಂಟೇಜ್ ತಗೋತಾರೆ ಅಂತಾರೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸ್ತಾರೆ ಅಂತಾರೆ ಪುಣ್ಯಾತ್ಮರು. ಎಷ್ಟು ದಾಖಲೆ ಇಡಬೇಕು ನಾನು. ಕೆಲವರಿಗೆ ಹಣದ ಮದ ಇದೆ. ನಮ್ಮನ್ನು ಕೆದಕಿದವರು ಏನು ಆಗಿದ್ದಾರೆ ಅಂತ ಗೊತ್ತಿದೆ.

ನಾನು ಎಲ್ಲಿ ಹಿಡಿಯಬೇಕೋ ಅಲ್ಲಿ ಹಿಡಿಯುತ್ತೇನೆ.‌ ನನ್ನ ಮೇಲೂ ನಾಲ್ಕು ಕೇಸ್ ಹಾಕಿದ್ದರು. ನನ್ನ ತಂಟೆಗೆ ಬರುವುದಕ್ಕೂ ಮುನ್ನ ಎಚ್ಚರ ಇರಬೇಕು. ತಿದ್ದಿಕೊಳ್ಳೋದಿಕ್ಕೆ ನಾನು ಸಮಯ ಕೊಡುತ್ತೇನೆ.‌ತಿದ್ದಿಕೊಂಡಿಲ್ಲ ಅಂದರೆ ಎಲ್ಲಿ ಹಿಡಿಯಬೇಕೋ ಅಲ್ಲಿ ಹಿಡಿಯುತ್ತೇನೆ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ವಾಗ್ದಾಳಿ ನಡೆಸಿದರು.ನಾನು ಕಣ್ಣೀರು ಹಾಕುತ್ತೇನೆ.

ನಾನು ನನ್ನ ತಂದೆ ವಿಚಾರಕ್ಕೆ ಅಷ್ಟೆ ಅಲ್ಲ ಅನೇಕರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಹಾಕುತ್ತೇನೆ. ಇವತ್ತೂ ಕೂಡ ಕೊರಟಗೆರೆಯವರು ಒಂದು ಮಗು ಎತ್ಕೊಂಡು ಬಂದಿದ್ರು.ಸಾಲ ಮಾಡಿ ಹಣ ಕಟ್ಟಿದ್ದಾರೆ ಆ ಮಗುವಿಗೆ.

ಇಂದು ಆ ಮಗುವಿಗೆ ಫ್ರೀ ಟ್ರೀಟ್ಮೆಂಟ್ ಗೆ ಸಹಾಯ ಮಾಡಿದೆ. ಕಣ್ಣಲ್ಲಿ ನೀರಾಕೋದು ಸಿಎಂ ಹುದ್ದೆಗೆ ಅಲ್ಲ. ಶ್ರೀಲಂಕಾಕ್ಕೆ ಹೋಗಿ ಬೆಟ್ಟಿಂಗ್ ಆಡಲಿಲ್ಲ. ಅಧಿಕಾರ ಹೋಯ್ತು ಅಂತ ಕಣ್ಣಲ್ಲಿ ನೀರಾಕಿಲ್ಲ. ನನ್ನ ಹತ್ತಿರ ಬರುವವರು ಸಮಸ್ಯೆ ಇರುವವರು.

ಮುಂದಿನ ಚುನಾವಣೆಯಲ್ಲಿ ಜನ ತೋರಿಸುತ್ತಾರೆ ಎಂದು ಅವರು ಗುಡುಗಿದರು.ಬಿಹಾರ ಬೆಳೆವಣಿಗೆಗೆ ಸ್ವಾಗತ:ನಿತೀಶ್ ಕುಮಾರ್ ಅವರು ಅವರು ಹಳೆಯ ಮಿತ್ರರ ಜೊತೆ ಸೇರಿ ಸಿಎಂ ಆಗಿದ್ದಾರೆ. ಅದಕ್ಕೆ ನಾನು ಸ್ವಾಗತ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.ಪರ್ಯಾಯ ಬರಬೇಕು ಅನ್ನೋದು ಇದೆ.

ಜನತಾ ಪರಿವಾರದ ತುಣುಕು ಅನೇಕ ಕಡೆ ಇದ್ದಾವೆ. ಜನತಾ ಪರಿವಾರದ ಜೊತೆ ಸೇರಿ ಸರ್ಕಾರ ಮಾಡಲು ತೀರ್ಮಾನ ಮಾಡಿದ್ದಾರೆ. ಎಲ್ಲಾ ಜನತಾ ಪರಿವಾರದವರು ಕೂತು ಚರ್ಚೆ ಮಾಡಿಬೇಕಿದೆ. ಕಾಂಗ್ರೆಸ್, ಬಿಜೆಪಿ ವಿರುದ್ಧ ಪರ್ಯಾಯ ವ್ಯವಸ್ಥೆ ಬರಬಹುದು. ಅಲ್ಲಿ ಅಂತಿಮವಾಗಿ‌ ಮನೆಗೆ ಕಳಿಸುವ ಸೂಚನೆ ಇತ್ತು.

ಹಾಗಾಗಿ ಇದೀಗ ಪರ್ಯಾಯ ಶಕ್ತಿಯಾಗಿ ಹೋಗಲು ಮುಂದಾಗಿದ್ದಾರೆ ಎಂದರು ಅವರು.ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಆಸಕ್ತಿ ಇಲ್ಲ:ಯಾರು ಯಾವಾಗ ಬದಲಾದರೂ ನನಗೆ ಆಸಕ್ತಿ ಇಲ್ಲ.

ಯಾರು ಬಂದರೂ ಈ ಸಚಿವ ಸಂಪುಟ ಇಟ್ಕೊಂಡು ಅಭಿವೃದ್ಧಿ ಮಾಡ್ತಾರೆ ಅನ್ನೋದು ಸುಳ್ಳು. ಇದು ಅವರ ಪಕ್ಷದ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button