ರಾಜ್ಯ

ಮೈಸೂರು ರೋಡ್‌ ಸ್ಕೈವಾಕ್‌ ಪೂರ್ಣಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ಚಾಟಿ

ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣ ಸಮೀಪ ಪಾದಚಾರಿಗಳು ಸುಗಮವಾಗಿ ರಸ್ತೆ ದಾಟುವುದಕ್ಕೆ ಸ್ಕೈವಾಕ್‌ ಕಾಮಗಾರಿಯನ್ನು (ಬಿಎಂಟಿಸಿ ಸಬ್‌ವೇ ಪ್ರವೇಶ ದ್ವಾರ) ಪೂರ್ಣಗೊಳಿಸಲು ಹೈಕೋರ್ಟ್ ಸಮ್ಮತಿಸಿದೆ.

ಸ್ಕೈವಾಕ್‌ ನಿರ್ಮಾಣಕ್ಕೆ ನೀಡಿದ್ದ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿಯ ಕ್ರಮವನ್ನು ವಜಾಗೊಳಿಸಿದ್ದ ಹೈಕೋರ್ಚ್‌ ಏಕ ಸದಸ್ಯ ಪೀಠ, ನಾಲ್ಕು ತಿಂಗಳಲ್ಲಿ ಸ್ಕೈವಾಕ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಕಂಪನಿಗೆ 2022ರ ಜೂ.

17ರಂದು ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಬಿಎಂಪಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಕಾಮಗಾರಿ ಪೂರ್ಣಗೊಳಿಸಲು ಮೆ.ಶಕ್ತಿ ಡೆವಲಪರ್ಸ್‌ ಲಿಮಿಟೆಡ್‌ಗೆ ಅನುಮತಿ ನೀಡಿದೆ.

ಬಿಬಿಎಂಪಿಯು ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ರಮಣಿ ಟಿಂಬರ್‌ ಮಾರ್ಕ್ ಮತ್ತು ಗಾಳಿ ಆಂಜನೇಯ ದೇವಸ್ಥಾನದ ಬಳಿ ಪ್ರತ್ಯೇಕ ಎರಡು ಸ್ಕೈವಾಕ್‌ ನಿರ್ಮಿಸಲು 2017ರಲ್ಲಿ ಗುತ್ತಿಗೆ ನೀಡಿತ್ತು. ಸ್ಯಾಟಲೈಟ್‌ ಬಸ್‌ ನಿಲ್ದಾಣ-ರಮಣಿ ಟಿಂಬರ್‌ ಮಾರ್ಕ್ ಸ್ಕೈವಾಕ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್‌ಆರ್‌ಟಿಸಿ ಮತ್ತು ಸಂಚಾರ ಪೊಲೀಸರು, ಬಿಎಂಟಿಸಿ ಸಬ್‌ ವೇ ಪ್ರವೇಶ ದ್ವಾರದ ಬಳಿ ಸ್ಕೈವಾಕ್‌ ಅಳವಡಿಕೆಗೆ 2018ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿದ್ದವು.

ಅದಕ್ಕೆ ಬಿಬಿಬಿಎಂಪಿ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.2019ರ ಸೆಪ್ಟೆಂಬರ್‌ನಲ್ಲಿ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿ, ಗಾಳಿ ಆಂಜನೇಯ ಬಳಿ ಸ್ಕೈವಾಕ್‌ ಇರುವುದರಿಂದ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಸ್ಕೈವಾಕ್‌ ಅಳವಡಿಕೆ ಬೇಡ ಎಂದು ನ್ಯಾಯಾಲಯಕ್ಕೆ ತಿಳಿಸುವ ಮೂಲಕ ಮೊದಲು ಕೈಗೊಂಡ ನಿರ್ಧಾರಕ್ಕೆ ಬಿಬಿಎಂಪಿಯೇ ಉಲ್ಟಾಹೊಡೆದಿದೆ.

ಈ ಧೋರಣೆಯನ್ನು ಒಪ್ಪಲಾಗದು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.ನಿಗದಿತ ಅವಧಿಯಲ್ಲಿ ಸ್ಕೈವಾಕ್‌ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದು ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿದೆ. ವಾಸ್ತವವಾಗಿ ಸರ್ಕಾರಿ ಪ್ರಾಧಿಕಾರಿಗಳಿಂದಲೇ ಕಾಮಗಾರಿ ವಿಳಂಬವಾಗಿದೆ.

ಈ ಕಾರಣ ಪರಿಗಣಿಸಿಯೇ ಏಕ ಸದಸ್ಯ ನ್ಯಾಯಪೀಠ ಸ್ಕೈವಾಕ್‌ ಅಳವಡಿಕೆಗೆ ಅನುಮತಿ ನೀಡಿದೆ. ಹೈಕೋರ್ಚ್‌ ಆದೇಶದ ನಂತರ ಗುತ್ತಿಗೆದಾರ ಕಂಪನಿ ಕಾಮಗಾರಿ ಆರಂಭಿಸಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಶೇ.80ರಷ್ಟುಕಾಮಗಾರಿ ಪೂರ್ಣಗೊಳಿಸಿದ್ದು, ಲಿಫ್ಟ್‌ ಅಳವಡಿಕೆ ಪರಿಶೀಲನೆ ನಡೆಸಲು ಬಿಬಿಎಂಪಿಗೆ ಕಂಪನಿ ಪತ್ರ ಬರೆದಿದೆ. ಈ ಹಂತದಲ್ಲಿ ಸ್ಕೈವಾಕ್‌ ಅಳವಡಿಕೆಯನ್ನು ನಿಲ್ಲಿಸಬಾರದು.

ಸ್ಕೈವಾಕ್‌ ಪೂರ್ಣಗೊಳಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button