ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ಹೆದ್ದಾರಿಯಲ್ಲಿ ಬಸವನಪುರ (ರಾಮನಗರ ಸಮೀಪ)ದಿಂದ ಹೆಜ್ಜಾಲದವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 15 ರಿಂದ ಸಂಚಾರಕ್ಕೆ ಅವಕಾಶ ನೀಡಬೇಕಾಗಿತ್ತು, ಆದರೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪರೀಕ್ಷಾ ದಿನಾಂಕ ವಿಳಂಬವಾಗಿದೆ. ಮತ್ತೊಂದೆಡೆ ಆಗಸ್ಟ್ ಅಂತ್ಯದ ವೇಳೆಗೆ ಹೆಜ್ಜಾಲದಿಂದ ರಾಮನಗರ ಕಡೆಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ನಲ್ಲಿ ಮಾಹಿತಿ ಕೂಡ ನೀಡಿದ್ದರು. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯದೇ ಇರುವುದರಿಂದ ಸಂಚಾರಕ್ಕೆ ಅನುವು ಮಾಡಿಕೊಡಲು ವಿಳಂಬವಾಗುತ್ತಿದೆ ಎಂದು ಹೇಳಿದ್ದರು.

ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಸಂಚಾರಕ್ಕೆ ಮುಕ್ತವಾಗಿರುವುದಕ್ಕೆ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ರಸ್ತೆಯ ಬದಿಗಳಲ್ಲಿ ಇರುವ ಹೋಟೆಲ್ ಮಾಲೀಕರು ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗಿರುವುದರಿಂದ ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು-ಮೈಸೂರು ರಸ್ತೆಯು ಆಹಾರ ಪ್ರಿಯರಿಗೆ ಸ್ವರ್ಗವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಜನಪ್ರಿಯ ಫುಡ್ ಜಾಯಿಂಟ್‌ಗಳು ಆಹಾರಕ್ಕೆ ಸಾಕಷ್ಟು ಜನಪ್ರಿಯವಾಗಿವೆ, ಬೆಂಗಳೂರು-ಮೈಸೂರು ಪ್ರಯಾಣಿಕರೇ ಈ ಹೋಟೆಲ್‌ಗಳ ಪ್ರಮುಖ ಗ್ರಾಹಕರಾಗಿದ್ದರು.

ಹೋಟೆಲ್ ಉದ್ಯಮದ ಮೇಲೆ ಪರಿಣಾಮ
ಹೋಟೆಲ್‌ಗಳು ಬಿಡದಿಯಿಂದ ಪ್ರಾರಂಭವಾಗುತ್ತವೆ. ಬಿಡದಿಯ ತಟ್ಟೆ ಇಡ್ಲಿ ಭಾರಿ ಪ್ರಸಿದ್ಧವಾದ ಸಾಂಪ್ರದಾಯಿಕ ಆಹಾರ. ಅದರಲ್ಲೂ ಬೆಂಗಳೂರು-ಮೈಸೂರು ಭಾಗದ ಪ್ರಯಾಣಿಕರಿಗೆ ಪ್ರಯಾಣದ ನಡುವೆ ಈ ಹೋಟೆಲ್‌ಗಳು ನೆಚ್ಚಿನ ತಾಣವಾಗಿದ್ದವು. ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ನೆಚ್ಚಿನ ಖಾದ್ಯವಾಗಿದ್ದವು.
ಆದರೆ, ಆರು-ಪಥದ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗೆ ಸಾಗಲು ಸೀಮಿತ ಅವಕಾಶ ಮಾತ್ರ ಇರುತ್ತದೆ. ಜೊತೆಗೆ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ವಾಹನ ಬಳಕೆದಾರರಿಗೆ ಹೋಟೆಲ್ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.