ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಲೋಪ : ಗಡ್ಕರಿ ಜತೆ ಸಿಎಂ ಚರ್ಚೆ

ಮೈಸೂರು- ಬೆಂಗಳೂರು ದಶಪಥ ರಸ್ತೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಲೋಪಗಳ ಕುರಿತು ಕೇಂದ್ರ ಭೂ ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತುಕತೆ ನಡೆಸಿದ್ದಾರೆ.
ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿದ್ದ ಗಡ್ಕರಿ ಅವರನ್ನು ಖಾಸಗಿ ಹೋಟೆಲ್‍ನಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿಯ ದೂರುಗಳ ಬಗ್ಗೆ ಗಮನಸೆಳೆದರು.ಇತ್ತೀಚೆಗೆ ರಾಮನಗರ ಸುತ್ತಮುತ್ತ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿಯೂ ನೀರು ನಿಂತು ಪ್ರಯಾಣಿಕರು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು.
ರಸ್ತೆಯಲ್ಲಿ ನೀರು ನಿಲ್ಲಲು ದಶಪಥ ರಸ್ತೆಯ ಕಳಪೆ ಕಾಮಗಾರಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಗಡ್ಕರಿ ಅವರನ್ನು ಭೇಟಿ ಮಾಡಿದ ಬೊಮ್ಮಾಯಿ ಅವರು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದು, ಕಾಮಗಾರಿ ನಡೆಸಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಭ್ರಷ್ಟಾಚಾರದ ವಾಸನೆ ಕಂಡುಬಂದಿದೆ.
ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಹಿಂದೆಮುಂದೆ ನೋಡಬೇಡಿ. ಇದರ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗುತ್ತದೆ ಎಂದು ಬೊಮ್ಮಾಯಿ ಮನವರಿಕೆ ಮಾಡಿಕೊಟ್ಟಿದ್ದಾರೆ.ಹೆದ್ದಾರಿ ನಿರ್ಮಾಣ ಮಾಡುವಾಗ ಮಾಡಿಕೊಂಡ ಒಪ್ಪಂದದಂತೆ ಗುಣಮಟ್ಟದ ಕಾಮಗಾರಿಯನ್ನು ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಎಲ್ಲೆಂದರಲ್ಲಿ ಹಮ್ಸ್ ಅಳವಡಿಸಿರುವುದು , ಸರಿಯಾದ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡದಿರುವುದು ಸೇರಿದಂತೆ ಹತ್ತಾರು ದೂರುಗಳು ಕೇಳಿಬಂದಿದೆ.ತಕ್ಷಣವೇ ಇದರ ಬಗ್ಗ ಸಮಗ್ರ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಮತ್ತು ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಗುತ್ತಿಗೆದಾರರು ಮಾಡುವ ನಿರ್ಲಕ್ಷ್ಯದಿಂದ ಚುನಾಯಿತ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ.
ಹೀಗಾಗಿ ಅಂಥವರ ಮೇಲೆ ಕಾನೂನು ಕ್ರಮದ ಅಗತ್ಯತೆಯನ್ನು ಗಡ್ಕರಿ ಅವರಿಗೆ ಬೊಮ್ಮಾಯಿ ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ರಾಮನಗರ, ಚನ್ನಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಭಾರೀ ಮಳೆಯಾಗಿ ಹೈವೆಯಲ್ಲಿ ನೀರು ನಿಂತಿತ್ತು.
ಇದು ಪ್ರತಿಪಕ್ಷ ಮತ್ತು ಬಿಜೆಪಿ ಸರ್ಕಾರದ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.