ಅಪರಾಧ

ಮೈಸೂರಿನ ಹೋಟೆಲ್‌ನಲ್ಲಿ ಪ್ರಿಯಕರನಿಂದಲೇ ಹತ್ಯೆಯಾದ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ!

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪ್ರಿಯಕರನಿಂದಲೇ ಕೊಲೆ ನಡೆದಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವವರ ಪುತ್ರಿ ಅಪೂರ್ವಶೆಟ್ಟಿ ಕೊಲೆಯಾಗಿರುವ ಯವತಿ. ಅಪೂರ್ವ ಶೆಟ್ಟಿಯನ್ನು ಪ್ರೀತಿಸುತ್ತಿದ್ದ ಆಶಿಕ್(28) ಎಂಬಾತನೆ ಕೊಲೆ ಮಾಡಿದ ಆರೋಪಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಪೂರ್ವಶೆಟ್ಟಿ ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಳು.

15 ದಿನ ಕಳೆದಿದ್ದರೆ ಅಪೂರ್ವ ಇಂಜಿನಿಯರಿಂಗ್ ಪದವಿ ಮುಗಿಸಿ ತನ್ನ ಊರಿಗೆ ಹೋಗುತ್ತಿದ್ದಳು. ಆದರೆ ವಿಧಿಯ ಆಟವೇ ಬೇರೆ ಇತ್ತು. ಸ್ನೇಹಿತನ ಜೊತೆ ಹೋಟೆಲ್‍ಗೆ ಬಂದಿದ್ದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಅಪೂರ್ವ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಆಶಿಕ್ ಜೊತೆ ಓಡಾಡುತ್ತಿದ್ದಳು. ಕಳೆದ 2 ದಿನಗಳ ಹಿಂದೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಆಶಿಕ್ ಜೊತೆಗೆ ಬಂದು ರೂಂ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು.

ಆಶಿಕ್ ಆಗಾಗ ಹೊರಗಡೆ ಹೋಗಿ ಮತ್ತೆ ಹೋಟೆಲ್‍ಗೆ ವಾಪಸ್ ಬರುತ್ತಿದ್ದ. ಗುರುವಾರ ಬೆಳಗ್ಗೆ ಹೋಟೆಲ್‍ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಬಂದಿರಲಿಲ್ಲ. ಅಪೂರ್ವ ಸಹ ಬೆಳಗ್ಗೆಯಿಂದ ಸಂಜೆಯವರೆಗೂ ಹೋಟೆಲ್‍ನಿಂದ ಹೊರಬಂದಿರಲಿಲ್ಲ.ಅಪೂರ್ವ ಹೊರಬರದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದ ಇಂಟರ್ ಕಾಂಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಅನುಮಾನಗೊಂಡ ಸಿಬ್ಬಂದಿ ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ರೂಂ ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ರೂಂನಲ್ಲಿ ಸಾವನ್ನಪ್ಪಿದ್ದಳು.ಇನ್ನೂ ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಕಳೆದ ಒಂದೂವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳ ಸಹ ಆಗಿತ್ತು. ಇಬ್ಬರಿಗೂ ಬುದ್ದಿ ಮಾತು ಹೇಳಿ ದೂರ ಆಗುವಂತೆ ಹೇಳಿದ್ದಾರೆ. ಇದಾದ ಬಳಿಕವೂ ಆಕೆ ಆತನ ಜೊತೆಯೇ ಸ್ನೇಹ ಮುಂದುವರೆಸಿದ್ದಳು. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು.

ಹೋಟೆಲ್‍ನಲ್ಲಿ ಒಟ್ಟಿಗೆ ಇದ್ದ ವೇಳೆ ಗಲಾಟೆ ನಡೆದು ಅಪೂರ್ವ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ. ಅಪೂರ್ವ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಬಳಿಕ ಕತ್ತು ಹಿಸುಕಿ‌‌ ಕೊಲೆಗೈದು ಪ್ರಿಯಕರ ಆಶಿಕ್ ಪರಾರಿಯಾಗಿದ್ದ. ಬಳಿಕ ಹೋಟೆಲ್‍ನಿಂದ ಹೊರಹೋದ ಆಶಿಕ್ ಸಹ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ.

ಆಶಿಕ್‍ನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆತನಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ವಿಚಾರಣೆ ವೇಳೆ ತಾನೇ ಅಪೂರ್ವಳನ್ನು ಕೊಲೆಗೈದಿರುವುದಾಗಿ ಆರೋಪಿ ಆಶಿಕ್ ತಪ್ಪೊಪ್ಪಿಕೊಂಡಿದ್ದಾನೆ.

ತಂದೆ-ತಾಯಿ ಓದು ಅಂತಾ ಕಳಿಸಿದ್ರೆ ಪ್ರೀತಿ-ಪ್ರೇಮ ಅನ್ನೂ ಹುಚ್ಚಿಗೆ ಬಿದ್ದ ಯುವತಿ ಈ ರೀತಿ ಸಾವನ್ನಪ್ಪಿರುವುದು ದುರಂತವೇ ಸರಿ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button