
ಕನ್ನಡ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನರಾದ ಬಳಿಕ ತಮಿಳು ನಟ ವಿಶಾಲ್ (Vishal) ಒಂದು ಮಾತನ್ನ ಹೇಳಿದ್ದರು.
ಅದೇನಪ್ಪಾ ಅಂದ್ರೆ, ಪುನೀತ್ ರಾಜ್‌ಕುಮಾರ್ ಅವರು ಜವಾಬ್ದಾರಿ ಹೊತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನ ತಾವು ವಹಿಸಿಕೊಳ್ಳುವುದಾಗಿ ನಟ ವಿಶಾಲ್ ತಿಳಿಸಿದ್ದರು. ಇದೀಗ ತಮಿಳು ನಟ ವಿಶಾಲ್ ಇಂದು ಮೈಸೂರಿಗೆ ಬಂದಿದ್ದಾರೆ.
ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ ನೀಡಿದ್ದಾರೆ. ಶಕ್ತಿಧಾಮದಲ್ಲಿರುವ ಮಕ್ಕಳೊಂದಿಗೆ ನಟ ವಿಶಾಲ್ ಮಾತುಕತೆ ನಡೆಸಿದ್ದಾರೆ.
ಶಕ್ತಿಧಾಮ’ವನ್ನು ವರನಟ ಡಾ.ರಾಜ್‌ಕುಮಾರ್ (Dr Rajkumar) ಹಾಗೂ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಆರಂಭಿಸಿದ್ದರು. ಶಕ್ತಿಧಾಮದಲ್ಲಿ ಸಾವಿರಾರು ಬಡ ಹೆಣ್ಣುಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ.
ಶಕ್ತಿಧಾಮದಲ್ಲಿರುವ ಮಕ್ಕಳಿಗಾಗಿ ಒಂದು ವಿಶೇಷ ಶಾಲೆಯನ್ನು ಆರಂಭಿಸಲು ಪುನೀತ್ ರಾಜ್‌ಕುಮಾರ್ ಸಜ್ಜಾಗಿದ್ದರು. ಆದರೆ, ಅಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು.
ಪುನೀತ್ ರಾಜ್‌ಕುಮಾರ್ ಅವರ ನಿಧನದ ಬಳಿಕ ಅವರ ಸಾಮಾಜಿಕ ಕಾರ್ಯಗಳು ಬಹಿರಂಗವಾದವು. ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ‘’ಮಕ್ಕಳ ವಿದ್ಯಾಭ್ಯಾಸವನ್ನು ನಾನು ವಹಿಸಿಕೊಳ್ಳುವೆ’’ ಎಂದು ನಟ ವಿಶಾಲ್ ಹೇಳಿದ್ದರು.
ನಟ ವಿಶಾಲ್ ಹೇಳಿದ್ದೇನು?‘’ನಾನು ಯಾವಾಗಲು ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಬೇಕು.
ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತು. ದೇವಸ್ಥಾನಕ್ಕೆ ಹೋದ್ರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ.
ಶಕ್ತಿಧಾಮದಲ್ಲಿರುವ ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ. ಪುನೀತ್ ರಾಜ್‌ಕುಮಾರ್, ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸ’’ ಅಂತ ನಟ ವಿಶಾಲ್ ಬಣ್ಣಿಸಿದರು.
ಡಾ.ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಬಗ್ಗೆ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದೇನೆ.
ಶಕ್ತಿಧಾಮದ ಮಕ್ಕಳ ಜೊತೆ ನಾನು ಮಾತನಾಡಿದೆ. ಡ್ಯಾನ್ಸ್ ಮಾಡಿದ್ರು, ಆಟವಾಡಿದ್ರು, ತುಂಬಾ ಉತ್ಸಾಹದಿಂದ ಇದ್ದಾರೆ.
ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ’’ ಅಂತ ಶಕ್ತಿಧಾಮಕ್ಕೆ ಭೇಟಿ ನೀಡಿದ ಬಳಿಕ ನಟ ವಿಶಾಲ್ ಹೇಳಿದರು.
ವಿಶಾಲ್ – ಅಪ್ಪು ಫ್ರೆಂಡ್ಸ್..!‘’ಕಳೆದ ಹಲವಾರು ವರ್ಷಗಳಿಂದ ಪುನೀತ್ ಹಾಗೂ ವಿಶಾಲ್ ಒಳ್ಳೆ ಸ್ನೇಹಿತರಾಗಿದ್ದರು. ಸಿನಿಮಾ ಹೊರತಾಗಿ ಒಳ್ಳೆ ಸಂಬಂಧ ಹೊಂದಿದ್ದರು.
ಪುನೀತ್ ನಿಧನರಾದಾಗ ವಿಶಾಲ್ ಸಾಕಷ್ಟು ನೋವು ಅನುಭವಿಸಿದ್ದರು. ಪುನೀತ್ ನಡೆಸುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಇಂಗಿತವನ್ನ ನಟ ವಿಶಾಲ್ ವ್ಯಕ್ತಪಡಿಸಿದ್ದರು.