ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಒತ್ತಾಯ

ಮೈಸೂರಿನ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಬೇಕು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ‘ಲೆಟ್ಸ್ ಡೂ ಇಟ್ ಮೈಸೂರು’ ಹಾಗೂ ವಿವಿಧ ಸಂಘಟನೆಗಳಿಂದ ಮೇಣದ ಬತ್ತಿ ಬೆಳಗಿ ಭಾನುವಾರ ಸಂಜೆ ಆಗ್ರಹಿಸಲಾಯಿತು.
ನಗರದ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ದಳದ ಕಚೇರಿ ಮುಂಭಾಗ ಜಮಾಯಿಸಿದ ಈ ಸಂಘಟನೆಗಳ ಸದಸ್ಯರು, ”ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ರಾಜ್ಯ ಸರಕಾರ ಮುಂದಾಗಬೇಕು” ಎಂದು ಆಗ್ರಹಿಸಿದರು.ಇತಿಹಾಸ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ”ನಗರದಲ್ಲಿ ನೂರೈವತ್ತು ವರ್ಷ ಪೂರೈಸಿದ 125 ಕಟ್ಟಡಗಳಿವೆ.
ಇದರಲ್ಲಿ 25 ಕಟ್ಟಡಗಳು ಸಂಪೂರ್ಣ ಶಿಥಿಲವಾಗಿದ್ದು, ಈ ಕಟ್ಟಡಗಳು ಯಾವಾಗ ಬೇಕಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಆದರೆ, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು ಎಂಬ ಕಾಳಜಿ ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೂ ಇಲ್ಲ.
ಹೀಗಿದ್ದ ಮೇಲೆ ಮೈಸೂರಿಗಿರುವ ಪಾರಂಪರಿಕ ನಗರಿ ಎಂಬ ಬಿರುದನ್ನು ಸರಕಾರ ವಾಪಸ್ ಪಡೆಯಲಿ” ಎಂದು ಆಗ್ರಹಿಸಿದರು.ಆಯೋಜಕ ಬಿ.ಎಸ್. ಪ್ರಶಾಂತ್ ಮಾತನಾಡಿ, ”ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪಾರಂಪರಿಕ ಕಟ್ಟಡ ಉಳಿಸಲು ಮೈಸೂರಿಗೆ ಎಷ್ಟು ಅನುದಾನ ತಂದಿದ್ದಾರೆ?” ಎಂದು ಪ್ರಶ್ನಿಸಿದರು. ”ಮೈಸೂರಿನಲ್ಲಿಪಾರಂಪರಿಕ ಕಟ್ಟಡಗಳನ್ನು ಉಳಿಸಲು ಧ್ವನಿ ಎತ್ತ ಬೇಕು, ಇಲ್ಲವಾದರೆ ಎಲ್ಲಕಟ್ಟಡಗಳು ನೆಲಸಮ ವಾಗುತ್ತದೆ.
ಸರಕಾರ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗದಿದ್ದರೆ ಮೈಸೂರಿಗೆ ಮುಖ್ಯಮಂತ್ರಿಗಳು, ಸಚಿವರು ಬಂದಾಗ ಘೆರಾವ್ ಹಾಕಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ದೇವರಾಜ ಅರಸು ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಜೆ.ಪಿ. ಅರಸ್, ಅಶೋಕ್, ಎ.ಸಿ.ರವಿ, ರವಿ ಮತ್ತಿತರರು ಪಾಲ್ಗೊಂಡಿದ್ದರು.