ಅಪರಾಧರಾಜ್ಯ

ಮೈಸೂರಿನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ

ಮೈಸೂರು: ಹಾಡಹಗಲೇ ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಸೋಮವಾರ ಈ ದುಷ್ಕೃತ್ಯ ನಡೆದಿದೆ.ಬೃಂದಾವನ ಬಡಾವಣೆ ನಿವಾಸಿ ಸಂಪತ್‌ಕುಮಾರ್‌(63) ಹತ್ಯೆಯಾದವರು.

ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಯಲ್ಲಿಮನೆಗೆ ನುಗ್ಗಿದ ದುಷ್ಕರ್ಮಿ ರಾಡ್‌ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಗರಬತ್ತಿ ವ್ಯಾಪಾರದೊಂದಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಸಂಪತ್‌ ಕುಮಾರ್‌ ಮಾಡುತ್ತಿದ್ದರು. ಇವರ ಪತ್ನಿ ಗಾಯತ್ರಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

16 ವರ್ಷದ ಪುತ್ರ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಬೆಳಗ್ಗೆ ಗಾಯತ್ರಿ ಅವರು ಎಂದಿನಂತೆ ಶಾಲೆಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಪುತ್ರ ಮನೆಗೆ ವಾಪಸ್ಸಾದ ಸಂದರ್ಭದಲ್ಲಿಈ ಘಟನೆ ನಡೆದಿದೆ.

ಪುತ್ರನ ಕಣ್ಣೆದುರೇ ಹತ್ಯೆ?: ಸಂಪತ್‌ ಕುಮಾರ್‌ ಅವರ ಪುತ್ರ ಕಾಲೇಜಿನಿಂದ ಮನೆಗೆ ವಾಪಸ್ಸಾಗುವ ಸಮಯದಲ್ಲೇ ಈ ಘಟನೆ ನಡೆದಿದೆ. ‘ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ತಂದೆಯ ತಲೆ ಹಿಂಭಾಗಕ್ಕೆ ಬಲವಾಗಿ ಹೊಡೆದ.

ನಾನು ರಕ್ಷಣೆಗೆ ಮುಂದಾದಾಗ ನನಗೂ ಹೊಡೆಯಲು ಬಂದ. ಭಯದಿಂದ ಕೂಗಿಕೊಂಡು ನಾನು ಹೊರಗೆ ಓಡಿಹೋಗಿ ನೆರೆ ಮನೆಯವರಿಗೆ ವಿಷಯ ತಿಳಿಸಿದೆ.

ಅಷ್ಟರಲ್ಲಿ ಆ ವ್ಯಕ್ತಿ ಓಡಿಹೋಗಿದ್ದ ಎಂದು ಸಂಪತ್‌ ಕುಮಾರ್‌ ಪುತ್ರ ಹೇಳಿಕೆ ನೀಡಿದ್ದಾನೆ,’ ಎಂದು ಪೊಲೀಸರು ತಿಳಿಸಿದ್ದಾರೆ.ತಕ್ಷಣ ನೆರೆಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮನೆಯೊಳಗೆ ಯಾರೂ ತೆರಳದಂತೆ ಬಂದೋಬಸ್ತ್‌ ಮಾಡಿದರು.

ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್‌ ಗುಂಟಿ ಹಾಗೂ ಗೀತಾ ಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್‌, ವಿವಿ ಪುರಂ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ವೆಂಕಟೇಶ್‌, ಸಿಸಿಬಿ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಮನೆಯ ಹಾಲ್‌ನಲ್ಲೇ ಹತ್ಯೆ ನಡೆದಿತ್ತು. ಘಟನಾ ಸ್ಥಳದಿಂದ ಮನೆಯ ಸುತ್ತು ಹಾಕಿದ ಶ್ವಾನ, ಹಿಂಭಾಗದ ರಸ್ತೆಯ ರಾಜಕಾಲುವೆ ಬಳಿ, ಅದೇ ರಸ್ತೆಯಲ್ಲಿಟೈಲ್ಸ್‌ ಅಳವಡಿಸಲಾಗುತ್ತಿದ್ದ ಮನೆ ಬಳಿ ಸುತ್ತಾಡಿ ಅದೇ ರಸ್ತೆಯಲ್ಲಿಮುಂದಕ್ಕೆ ಸುಮಾರು ದೂರ ಹೋಗಿ ಅರ್ಧ ಗಂಟೆ ಬಳಿಕ ವಾಪಸ್ಸಾಯಿತು.

ಸಂಪತ್‌ ಕುಮಾರ್‌ ಮನೆ ಪಕ್ಕದಲ್ಲಿ ಖಾಲಿ ನಿವೇಶನವಿದ್ದು, ಅಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ದುಷ್ಕರ್ಮಿ ಪರಾರಿಯಾಗಿರುವ ಹತ್ಯೆಗೆ ಬಳಸಿದ ವಸ್ತುವನ್ನು ಬಿಸಾಡಿರಬಹುದೆಂದು ಪೊಲೀಸರು ಹುಡುಕಾಟ ಮುಂದುವರಿಸಿದ್ದರು.

ಭಯಭೀತರಾದ ಜನ:ಹಾಡಹಗಲೇ ಮನೆಗೆ ನುಗ್ಗಿ ಹತ್ಯೆ ಮಾಡಿರುವ ವಿಷಯ ತಿಳಿದ ಸ್ಥಳೀಯರು ಭಯಭೀತಗೊಂಡು ಸ್ಥಳದಲ್ಲಿಜಮಾಯಿಸಿದರು. ಅಲ್ಲದೆ ಸುತ್ತಮುತ್ತಲ ಬಡಾವಣೆಯ ನೂರಾರು ಮಂದಿ ಸ್ಥಳಕ್ಕೆ ದೌಡಾಯಿಸಿ, ಆತಂಕ ವ್ಯಕ್ತಪಡಿಸಿದರು.

ವೈಯಕ್ತಿಕ ಕಾರಣವೇ?: ಸಂಪತ್‌ ಕುಮಾರ್‌ ದೊಡ್ಡ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರಲಿಲ್ಲ. ಅಗರ ಬತ್ತಿ ಮಾರಾಟ ಮಾಡುವುದರ ಜತೆಗೆ ಅವಕಾಶ ಸಿಕ್ಕಾಗ ಮನೆ ಮಾರಾಟ ಮಾಡಿಸುವುದು, ಭೋಗ್ಯ ಅಥವಾ ಬಾಡಿಗೆಗೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಯಾರೊಂದಿಗೂ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರವಿರಲಿಲ್ಲ.

ಕುಟುಂಬದಲ್ಲೂ ಯಾವ ಗಲಾಟೆಯೂ ಇರಲಿಲ್ಲ. ಸಂಪತ್‌ ಕುಮಾರ್‌ ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳುವ ವ್ಯಕ್ತಿಯೂ ಆಗಿರಲಿಲ್ಲ. ವೈಯಕ್ತಿಕ ಕಾರಣದಿಂದ ಹತ್ಯೆ ನಡೆದಿರಬಹುದೆಂಬ ಸಂದೇಹ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪತ್‌ ಕುಮಾರ್‌ ಕೊಲೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳ ಬಂಧನದ ಬಳಿಕವೇ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ.-ಡಾ.ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button