ಮೈಸೂರಲ್ಲಿ 15 ಸಾವಿರ ಜನರ ಜೊತೆ ಯೋಗಾಭ್ಯಾಸ ಮಾಡಿದ ಪ್ರಧಾನಿ ಮೋದಿ
International Yoga Day 2022 PM Modi in Mysuru

ಇಡೀ ವಿಶ್ವವೆ ಅತ್ಯಾಕರ್ಷಿಸಿದ ಯೋಗದ ವಿಶಿಷ್ಟ ಕಾರ್ಯಕ್ರಮ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿಂದು ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ಭಾಗಿಯಾಗಿ ಯೋಗದ ಹಲವು ಭಂಗಿಗಳನ್ನು ಪ್ರದರ್ಶಿಸಿದರು.ಸ್ಕಂದ ಚಕ್ರ ಅಭ್ಯಾಸ, ತಾಡಾಸನ, ವೃಕ್ಷಾಸನ,ಮಕರಾಸನ, ಶಲಭಾಸನ, ಉತ್ಥಾನ ಪಾದಾಸನ, ಕಪಾಲಭಾತಿ, ಧ್ಯಾನ ಅಭ್ಯಾಸದೊಂದಿಗೆ ಶಾಂತಿ ಮಂತ್ರ ಪಠಣೆ ಸೇರಿದಂತೆ ಯೋಗದ ಹಲವು ಭಂಗಿಗಳನ್ನು ಈ ವೇಳೆ ಪ್ರದರ್ಶಿಸಿದರು.
ಸುಮಾರು ಮುಕ್ಕಾಲು ಗಂಟೆ ನಡೆದ ಯೋಗದಲ್ಲಿ ನರೇಂದ್ರ ಮೋದಿ ಅವರು ಹಲವು ಆಸನಗಳ ಪ್ರದರ್ಶನ ಮಾಡಿದರು.
ತಮಗಾಗಿ ವ್ಯವಸ್ಥೆ ಮಾಡಿದ್ದ ಸ್ಥಳ ಬಿಟ್ಟು ಸಾಮಾನ್ಯ ಜನರೊಡನೆ ನರೇಂದ್ರ ಮೋದಿ ಯೋಗ ಮಾಡಿದ್ದು ವಿಶೇಷವಾಗಿತ್ತು.ವಿಶ್ವ ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ನಡೆದ ವಿಶ್ವ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಯೋಗಪಟುಗಳು ಭಾಗವಹಿಸಿದ್ದರು.
ಮುಂಜಾನೆಯ ತಂಪಾದ ವಾತಾವರಣ, ತಂಗಾಳಿಯಲ್ಲಿ ಯೋಗ ಪ್ರದರ್ಶನ ಮಾಡಿ ವಿಶಿಷ್ಟ ಅನುಭವ ಪಡೆದರು. ಮಂಗಳಮುಖಿಯರು ಕೂಡ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೈಸೂರು ರಾಜವಂಶಸ್ಥರಾದ ಯದುವೀರ್ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರು ಕೂಡ ಯೋಗದಲ್ಲಿ ಭಾಗಿಯಾಗಿದ್ದರು.