
ಸಂಚಾರಿ ಪಶು ಚಿಕಿತ್ಸಾಲಯ(ಆ್ಯಂಬುಲೆನ್ಸ್ ) ಗಳನ್ನು ಮೇ 7ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸಂಚಾರಿ ಪಶು ಚಿಕಿತ್ಸಾಲಯವನ್ನು ಪರೀಕ್ಷಿಸಿ, ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಮೇ 7ರಂದು ವಿಧಾನಸೌಧದ ಆವರಣದಲ್ಲಿ ಭಾರತ ಸರ್ಕಾರದ ಕೇಂದ್ರ ಪಶು ಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲï, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ಸೋಮಣ್ಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಹಸಿರು ನಿಶಾನೆ ತೋರಿಸುವ ಮೂಲಕ 275 ಆ್ಯಂಬುಲೆನ್ಸ್ ಗಳ ಪೈಕಿ 70 ಆ್ಯಂಬುಲೆನ್ಸ್ ಗಳನ್ನು ಜಾನುವಾರುಗಳ ಸೇವೆಗೆ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದಾರೆ.
2021-2022ನೆ ಸಾಲಿನ ಕೇಂದ್ರ ಸರ್ಕಾರದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ ಅನುದಾನದಲ್ಲಿ ಅಗತ್ಯ ತುರ್ತು ಸೇವೆ ಒದಗಿಸುವ ಸಲುವಾಗಿ ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಒದಗಿಸಲಾಗಿದ್ದು, ಈ ಪೈಕಿ ಪೂರ್ಣಗೊಂಡಿರುವ 70 ಪಶು ಚಿಕಿತ್ಸಾ ವಾಹನಗಳನ್ನು ಜಾನುವಾರುಗಳ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ರೈತರಿಗೆ, ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾನುವಾರುಗಳ ಸಂರಕ್ಷಣೆ, ಪಾಲನೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನಗಳ ಮೂಲಕ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿತ್ತು. ಇದರ ಮುಂದುವರೆದ ಭಾಗವೇ ಸಂಚಾರಿ ಪಶು ಚಿಕಿತ್ಸಾ ವಾಹನವಾಗಿದೆ ಎಂದು ಪ್ರಭು ಚವ್ಹಾಣ್ ಸ್ವಷ್ಟಪಡಿಸಿದ್ದಾರೆ.