ಮೇಕೆದಾಟು ಯೋಜನೆ ಆರಂಭಿಸಲು ಸಿದ್ದು ಒತ್ತಾಯ

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಯಾವುದೇ ರೀತಿಯ ಪತ್ರ ಬರೆದಿದ್ದರೂ ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲ.
ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಅಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರ ತಕರಾರು ನಿವಾರಿಸಿ ಯೋಜನೆ ಆರಂಭಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಯಾವುದೇ ಅಡೆತಡೆ ಇಲ್ಲ. ಕಾನೂನು ರೀತಿ ಎಲ್ಲವೂ ಮುಕ್ತವಾಗಿದೆ.
ರಾಜ್ಯ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಅಗತ್ಯವಾದ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ಕಾಮಗಾರಿ ಆರಂಭಿಸಬೇಕು ಎಂದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆಯಲ್ಲಿ ಹಲವಾರು ಬಾರಿ ಮೇಕೆದಾಟು ಯೋಜನೆ ಚರ್ಚೆಗೆ ವಿಷಯ ಮಂಡನೆಯಾಗಿದೆ. ಆದರೆ ಯಾವುದೇ ತೀರ್ಮಾನವಾಗದೆ ಮುಂದೂಡಲಾಗುತ್ತಿದೆ.
ತೀರ್ಮಾನ ಮಾಡದಂತೆ ಬಿಜೆಪಿ ಹೈಕಮಾಂಡ್ ಒತ್ತಡ ಹೇರುತ್ತಿದೆ. ಮಂಡಳಿಯಲ್ಲಿರುವವರೆಲ್ಲ ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡಿದ ಸದಸ್ಯರು ಎಂದು ಹೇಳಿದರು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದು ರಾಜಕೀಯ ದ್ವೇಷಕ್ಕಾಗಿಯೇ ಮಾತ್ರ. ಈ ಪ್ರಕರಣ ಈಗಾಗಲೇ ಇತ್ಯರ್ಥವಾಗಿದೆ.
ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟವಾಗಿದೆ. ಆದರೂ ರಾಜಕೀಯ ಸೇಡಿಗೆ ಮತ್ತೆ ಪ್ರಕರಣಕ್ಕೆ ಚಾಲನೆ ನೀಡಿ ಕಿರುಕುಳ ನೀಡುತ್ತಿದ್ದಾರೆ. ಅದನ್ನು ಪ್ರತಿಭಟಿಸಲು ಹೋದವರನ್ನು ಬಂಧಿಸಲಾಗುತ್ತಿದೆ.
ಇದೇನು ಪ್ರಜಾಪ್ರಭುತ್ವವೇ ಅಥವಾ ಸರ್ವಾಧಿಕಾರಿ ಆಡಳಿತವೇ ಎಂದು ಕಿಡಿಕಾರಿದರು.ಸಂವಿಧಾನ ಪರಿಚ್ಛೇಧ 19 ದೇಶದ ಪ್ರತಿಯೊಬ್ಬರಿಗೂ ಪ್ರತಿಭಟನೆಯ ಹಕ್ಕು ನೀಡಿದೆ. ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ.
ಪ್ರಜಾಪ್ರಭುತ್ವ ಗೊತ್ತಿಲ್ಲ. ಅಧಿಕಾರದ ಮದದಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಮೊದಲು ಅವರು ಸಂವಿಧಾನವನ್ನು ಓದಿ ತಿಳಿದುಕೊಳ್ಳಲಿ.
ಈಗ ಪ್ರತಿಭಟನೆಯನ್ನು ವಿರೋಸುತ್ತಿರುವ ಬಿಜೆಪಿಯವರು ಈ ಮೊದಲು ತುರ್ತು ಪರಿಸ್ಥಿತಿಯನ್ನು ಏಕೆ ವಿರೋಧಿಸಿದರು.
ಯಾವುದೆ ತುರ್ತು ಪರಿಸ್ಥಿತಿ ಇಲ್ಲದೇ ಇದ್ದರೂ ಈಗ ಪಕ್ಷದ ಕಚೇರಿಗೆ ಹೋಗುತ್ತಿದ್ದ ಕಾಂಗ್ರೆಸ್‍ನವರನ್ನು ಬಂಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮೇಲೆ ದೆಹಲಿ ಪೊಲೀಸರು ಹಲ್ಲೆ ಮಾಡಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.