ಬೆಂಗಳೂರು: ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದೊಳಗೆ ವ್ಯಾಪಾರಿಗಳ ಉಪಟಳ ಹೆಚ್ಚಾಗಿದ್ದು, ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ದೈಹಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ರೈಲಿನಲ್ಲಿ ಬರುವ ಪ್ರಯಾಣಿಕರು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರಲು ಈ ಸುರಂಗ ಮಾರ್ಗ ಬಳಸುತ್ತಾರೆ. ಇದೇ ಮಾರ್ಗದಲ್ಲಿ ವ್ಯಾಪಾರಿಗಳು ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಯಾರಾದರೂ ಈ ವಸ್ತುಗಳನ್ನು ನೋಡಿ ಬೆಲೆ ಕೇಳಿ ಖರೀದಿಸದಿದ್ದರೆ ಅಂತಹವರ ಮೇಲೆ ವ್ಯಾಪಾರಿಗಳೆಲ್ಲರೂ ಸಂಘಟಿತರಾಗಿ ಹಲ್ಲೆ ಮಾಡಿ ಗೂಂಡಾ ವರ್ತನೆ ತೋರುತ್ತಿದ್ದಾರೆ. ಆದರೂ ಇಲ್ಲಿನ ಪೊಲೀಸರು ಗ್ರಾಹಕರ ನೆರವಿಗೆ ಬಾರದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಕಿರಿದಾದ ಜಾಗದಲ್ಲೇ 50ಕ್ಕೂ ಹೆಚ್ಚು ಮಳಿಗೆಗಳು: ಜನರು ಸರಾಗವಾಗಿ ತೆರಳಲಿ ಎಂದು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಆದರೆ ಇಲ್ಲೇ ವಿವಿಧ ವಸ್ತುಗಳನ್ನು ಮಾರುವುದರಿಂದ ಮಾರ್ಗ ಕಿರಿದಾಗಿ ಜನರು ಇಕ್ಕಟ್ಟಿನಿಂದ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಈ ಸುರಂಗ ಮಾರ್ಗದಲ್ಲಿ ಬರುವ ಮಹಿಳೆಯರು ಅಥವಾ ಯುವತಿಯರು ಬಟ್ಟೆ, ಇತರೆ ಉಡುಪುಗಳು, ಚಪ್ಪಲಿಗಳನ್ನು ನೋಡಿ ಕಡಿಮೆ ಬೆಲೆಗೆ ಕೇಳಿದಾಗ ಅಂಥವರನ್ನು ಅಲ್ಲಿನ ವ್ಯಾಪಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.

ದೂರು ದಾಖಲಿಸಲು ಹೆದರುವ ಜನರು: ದೂರದೂರಿನಿಂದ ಬರುವ ಪ್ರಯಾಣಿಕರು ಹಲ್ಲೆಗೊಳಗಾದರೂ ಸ್ಥಳೀಯ ವ್ಯವಸ್ಥೆಯ ಬಗ್ಗೆ ಅರಿವಿಲ್ಲದ ಅವರು ದೂರು ನೀಡದೆ ಕಿರುಕುಳ ಸಹಿಸಿಕೊಂಡು ಹೋಗುತ್ತಾರೆ.
ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ: ಸುರಂಗ ಮಾರ್ಗದೊಳಗೆ ವ್ಯಾಪಾರಿಗಳು ಸಾರ್ವಜನಿಕರಿಗೆ ತೀವ್ರ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತ ರವಿಕುಮಾರ ಕಂಚನಹಳ್ಳಿ ಎಂಬುವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಂಗ ಮಾರ್ಗದೊಳಗೆ ಯಾವುದೇ ವ್ಯಾಪಾರ ಮಳಿಗೆ ಇರುವಂತಿಲ್ಲ. ಎಲ್ಲವನ್ನೂ ತೆರವುಗೊಳಿಸುವಂತೆ ಸರಕಾರಕ್ಕೆ 2019ರ ಆಗಸ್ಟ್ 27ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕ್ ಆದೇಶಿಸಿದ್ದರು. ಇದಾದ ಬಳಿಕ ಎರಡು ತಿಂಗಳ ಕಾಲ ಸುರಂಗ ಮಾರ್ಗದಲ್ಲಿನ ವ್ಯಾಪಾರಿಗಳನ್ನು ತೆರವು ಮಾಡಲಾಗಿತ್ತು.

ಈ ಒಂದು ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಆರ್ಡರ್ ಮಾಡಿ ತೆರವುಗೊಳಿಸಲು ತಿಳಿಸಿತ್ತು, ಅ ನಂತರ ಬಿಬಿಎಂಪಿ ಅಧಿಕಾರಿಗಳು ಅವರಿಗೆಲ್ಲ ಬೀದಿಬದಿ ವ್ಯಾಪಾರಿಗಳು ಅಂತ ಐಡಿ ಕಾರ್ಡ್ ಕೊಟ್ಟು, ಅದರ ಆಧಾರದ ಮೇಲೆ ಹೈಕೋರ್ಟ್ ಸಿಂಗಲ್ ಬೆಂಚ್ ಇಂದ ಸ್ಟೇ ತಗೊಂಡಿದ್ರು, ಈಗ ಸಿವಿಲ್ ಕೋರ್ಟ್ ನಲ್ಲಿ ಬಗೆ ಹರಿಸಿಕೊಳ್ಳಲು ಹೈಕೋರ್ಟ್ ಆದೇಶ ಮಾಡಿದೆ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ದತೆ ಮಾಡಿಕೊಂಡಿದ್ದೇನೆ ಹಣಕಾಸಿನ ತೊಂದರೆ ಇಂದ ಲೇಟ್ ಆಗ್ತಿದೆ ಎಂದು ಆರ್.ಟಿ.ಐ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿಯವರು ತಿಳಿಸಿದ್ದಾರೆ