ಮೃತ್ಯುಕೂಪವಾದ ಹೆದ್ದಾರಿ: ಈ ರಾಜ್ಯದ ಹೈವೇಯ ದುಸ್ಥಿತಿ ನೀವೇ ನೋಡಿ!

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ನಿರ್ಮಾಣ ಪ್ರಾಧಿಕಾರಗಳು ಹೆದ್ದಾರಿ ಕಾಮಗಾರಿ ನಿರ್ಮಾಣ ಮಾಡಲು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿವೆ. ಅದರ ಪ್ರಕಾರವೇ ರಸ್ತೆಗಳ ನಿರ್ಮಾಣ ಕೂಡ ನಡೆಯುತ್ತಿವೆ. ಆದರೆ ಕೆಲವೊಂದು ಭಾಗಗಳ ರಸ್ತೆಗಳಳಿಗೆ ಅಭಿವೃದ್ಧಿಯ ಕಾಯಕಲ್ಪ ಇನ್ನೂ ಕನಸಿನ ಮಾತಾಗಿದೆ. ಅಲ್ಲಿನ ರಸ್ತೆಗಳ ದುಸ್ಥಿತಿ ಕಂಡರೆ ಎಂಥವರಿಗೂ ಶಾಕ್ ಆಗದೆ ಇರದು. ಇಂತಹ ಸಮಸ್ಯೆಗಳು ಪ್ರಾಧಿಕಾರಗಳ ಕಣ್ಣಿಗೆ ಬೀಳದೆ ಹಿಂದುಳಿದಿದೆಯೋ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಿದೆಯೋ ಎಂಬುದು ತಿಳಿಯದ ಸಂಗತಿ.
ಇದೀಗ ಅಂತಹದ್ದೇ ಒಂದು ಹೆದ್ದಾರಿ ದೇಶದಲ್ಲಿ ಕಂಡುಬಂದಿದೆ. ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227ರ ಸ್ಥಿತಿಯನ್ನು ಕಂಡರೆ ಎಂಥವರಿಗೂ ಒಂದು ಕ್ಷಣ ಶಾಕ್ ಆಗೋದು ಖಂಡಿತ. ರಸ್ತೆಯಲ್ಲಿ ಹೊಂಡವಿದೆಯೋ ಅಥವಾ ಹೊಂಡದಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೋ ಎಂಬ ಗೊಂದಲ ಮೂಡುತ್ತದೆ.
ಬಿಹಾರದ ಈ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಪದಗಳಲ್ಲಿ ಹೇಳೋದಕ್ಕೆ ಸಾಧ್ಯವಿಲ್ಲ. ದಾರಿಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ. ಇನ್ನೇನು ಮಳೆಗಾಲ ಪ್ರಾರಂಭವಾಗಿದೆ. ಜೋರಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಂಡಗಳು ನೀರಿನಿಂದ ಆವೃತವಾಗಿವೆ. ಪರಿಣಾಮ ಸವಾರರು ವಾಹನ ಚಲಾಯಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯು ನೋಡೋದಕ್ಕೆ ಮಾತ್ರ ದಾರಿಯಂತೆ ಕಂಡರೂ ಮೃತ್ಯುಕೂಪವೇನೋ ಎಂಬಂತೆ ಭಾಸವಾಗುತ್ತದೆ. ಸದ್ಯ ಇಲ್ಲಿವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಂಡಿಲ್ಲ ಎಂದಾದರೆ ಜನರು ಮತ್ತಷ್ಟು ಸಂಕಷ್ಟ ಎದುರಿಸುವುದು ಮಾತ್ರ ಖಂಡಿತ.
ಈ ರಸ್ತೆಗಳ ದುರಸ್ತಿಗೆಂದು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ನಾಪತ್ತೆಯಾಗಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಸಮನಾಗಿರುತ್ತದೆ ಎಂದು ಹೇಳಿದ್ದರು” ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಎರಡು ವಾರಗಳಲ್ಲಿ ಹೆದ್ದಾರಿ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದೆ.