ಮೂತ್ರ ವಿಸರ್ಜನೆಗೂ ಜಿಎಸ್ಟಿ, ಕಟ್ಟದಿದ್ದರೇ ಅರೆಸ್ಟ್: ವಾಟಾಳ್ ನಾಗರಾಜ್ ಟೀಕೆ

ಚಾಮರಾಜನಗರ: ಮೂತ್ರ ವಿಸರ್ಜನೆಗೂ ಇನ್ಮುಂದೆ ಜಿಎಸ್ಟಿ ಕಟ್ಟಿಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಟು ಶಬ್ಧಗಳಲ್ಲಿ ವಾಟಾಳ್ ನಾಗರಾಜ್ ಟೀಕಿಸಿದರು.
ದಿನಸಿ ಪದಾರ್ಥಗಳಿಗೂ ಜಿಎಸ್ಟಿ ಹೇರಿರುವ ಕುರಿತು ನಗರದಲ್ಲಿ ಅವರು ಮಾತನಾಡಿ, ಪರಿಸ್ಥಿತಿ ಇದೇ ರೀತಿ ಮುಂದುವರೆದರೇ ಮೂತ್ರ ವಿಸರ್ಜನೆಗೂ ಜಿಎಸ್ಟಿ ಕಟ್ಟಬೇಕಾಗುತ್ತದೆ.ಎಷ್ಟು ಪ್ರಮಾಣದಲ್ಲಿ ಮೂತ್ರ ಬಿಟ್ಟೆವೂ ಅಷ್ಟು ಟ್ಯಾಕ್ಸ್ ಕಟ್ಟಬೇಕು, ಕಟ್ಟದಿದ್ದರೇ ಪೊಲೀಸರು ಬಂಧಿಸಲಿದ್ದಾರೆ ಇದನ್ನು ಅಶ್ಲೀಲವಾಗಿ ಹೇಳುತ್ತಿಲ್ಲ ಪರಿಸ್ಥಿತಿ ಇಷ್ಟು ಗಂಭೀರವಾಗಿದೆ ಎಂದರು.
ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಹೇರಿರುವುದು ಸೂಕ್ತವಲ್ಲ, ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಇಳಿದರೇ ದೇಶ ಸುಭಿಕ್ಷವಾಗಲಿದೆ, ಅವರು ಅಂಬಾನಿ-ಅದಾನಿ ಪರ, ಬಡವರ ಪರ ಎಂಬ ಮುಖವಾಡ ಧರಿಸಿದ್ದಾರೆ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಚಾಮರಾಜೇಶ್ವರ ದೇಗುಲದ ಮುಂಭಾಗ ಛತ್ರಿ ಹಿಡಿದು ಪ್ರತಿಭಟಿಸಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುವುದು ಬಿಟ್ಟು ಪ್ರಧಾನಿ ಕರ್ನಾಟಕಕ್ಕೆ ಬಂದು ನೆರೆ ಹಾನಿ ವೀಕ್ಷಿಸಿ ಪರಿಹಾರ ಘೋಷಿಸಬೇಕು. ಪ್ರಾಣಹಾನಿಯಾದ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.