
ನಗರಸಭೆ ಸದಸ್ಯ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಪಟ್ಟಣದ ಮುತ್ಯಾಲಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಜಗನ್‍ಮೋಹನ್ ರೆಡ್ಡಿ (45)ಕೊಲೆಯಾದ ನಗರಸಭೆ ಸದಸ್ಯ.ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಅವರ ಬೆಂಬಲಿಗರಾದ ಜಗನ್‍ಮೋಹನ್ ಹಾಲಿ ನಗರಸಭೆ ಸದಸ್ಯರಾಗಿದ್ದು, ಮುತ್ಯಾಲಪೇಟೆಯ ಗಂಗಮ್ಮನ ದೇವಾಲಯದ ಪಕ್ಕದಲ್ಲೇ ಇವರ ಮನೆ ಇದ್ದು, ಪ್ರತಿ ದಿನ ಇವರೇ ದೇವಾಲಯದ ಬಾಗಿಲು ತೆರೆಯುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ 5.45ರಲ್ಲಿ ಬಾಗಿಲು ತೆಗೆಯುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ತಂಡ ಸುತ್ತುವರೆದು ಚಾಕುವಿನಿಂದ ಬರ್ಬರವಾಗಿ ಇರಿದು ಪರಾರಿಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗನ್‍ಮೋಹನ್ ರೆಡ್ಡಿ ಅವರನ್ನು ಸ್ಥಳೀಯರು ತಕ್ಷಣ ಆತ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಿಂದ ಮುಳಬಾಗಿಲು ಪಟ್ಟಣದ ಜನರು ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಸ್‍ಪಿ ದೇವರಾಜ್, ಡಿವೈಎಸ್‍ಪಿ ಜೈಶಂಕರ್, ಸಿಪಿಐ ಲಕ್ಷ್ಮೀಕಾಂತ್, ಸಿಬ್ಬಂದಿಗಳು ಬೆರಳಚ್ಚು ಹಾಗೂ ಶ್ವಾನ ತಂಡಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿ ಟಿವಿ ಪುಟೇಜ್‍ಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.