ಮುರುಘಾ ಮಠಕ್ಕೆ ಮಹಾಂತಶ್ರೀ ಉಸ್ತುವಾರಿ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿ ಮುರುಘಾ ಶ್ರೀಗಳು ಜೈಲು ಪಾಲಾಗಿರುವುದರಿಂದ ಕೋಟೆ ನಾಡಿನ ಐತಿಹಾಸಿಕ ಮುರುಘಾ ಮಠಕ್ಕೆ ಹಿರಿಯ ಶ್ರೀಗಳಾದ ಹೆಬ್ಬಾಳ ಶಾಖಾಮಠದ ಮಹಾಂತರುದ್ರ ಸ್ವಾಮೀಜಿಗಳಿಗೆ iಠದ ಜವಾಬ್ದಾರಿ ವಹಿಸಲಾಗಿದೆ.
ತಲತಲಾಂತರದಿಂದ ಹಲವು ಸಮಾಜ ಸೇವೆಗಳಲ್ಲಿ ತೊಡಗಿರುವ, ಅಪಾರ ಭಕ್ತ ಸಮೂಹವನ್ನು ಹೊಂದಿರುವ ಮಠಕ್ಕೆ ಈಗ ದಿಕ್ಕೇ ಇಲ್ಲದಂತಾಗಿದೆ. ಹೀಗಾಗಿ, ಮಠದ ಉಸ್ತುವಾರಿಗಾಗಿ ಮಹಾಂತ ರುದ್ರಸ್ವಾಮೀಜಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.ಮುರುಘಾಮಠ ರಾಜ್ಯದ ಹಲವು ಭಾಗಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.
ಈ ಶಿಕ್ಷಣ ಸಂಸ್ಥೆಗಳಲ್ಲಿ ಬಡವರು ಮತ್ತು ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡಲಾಗುತ್ತಿದೆ. ರಾಜಕೀಯವಾಗಿಯೂ ಶಕ್ತಿ ಕೇಂದ್ರವಾಗಿದೆ.ಮುರುಘಾ ಶ್ರೀಗಳು ಬಂಧನದ ನಂತರ ಮಠದ ಆಗುಹೋಗುಗಳನ್ನು ನೋಡಿಕೊಳ್ಳಲು ಉಸ್ತುವಾರಿ ಅವಶ್ಯಕತೆ ಇರುವುದರಿಂದ ಅವರ ಎಲ್ಲ ಅಧಿಕಾರಗಳನ್ನು ಮಹಾಂತರುದ್ರ ಸ್ವಾಮೀಜಿಗಳಿಗೆ ನೀಡಲಾಗಿದೆ.
ಮಹಾಂತರುದ್ರ ಸ್ವಾಮೀಜಿಗಳು ಹೆಬ್ಬಾಳು ರುದ್ರಸ್ವಾಮಿ ಮಠದ ಪೀಠಾಧ್ಯಕ್ಷರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೆಬ್ಬಾಳದಲ್ಲಿ ರುದ್ರಸ್ವಾಮಿ ಮಠವಿದ್ದು, ಇದು ಮುರುಘಾಮಠದ ಶಾಖಾ ಮಠವಾಗಿದೆ. ಈ ಮಠದ ಪೀಠಾಧಿಪತಿಯಾಗಿರುವ ಮಹಂತರುದ್ರ ಸ್ವಾಮೀಜಿ ಮುರುಘಾ ಮಠದ ಶಾಖಾ ಮಠದಲ್ಲೇ ಅತ್ಯಂತ ಹಿರಿಯ ಶ್ರೀಗಳೆನಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಮುರುಘಾ ಪರಂಪರೆಯನ್ನು ತಪ್ಪದೆ ಪಾಲಿಸುತ್ತ ಬಂದಿದ್ದಾರೆ. ಹೀಗಾಗಿ, ಮುರುಘಾ ಶರಣರ ಮೇಲಿನ ಜವಾಬ್ದಾರಿಯನ್ನು ಮಹಾಂತರುದ್ರ ಸ್ವಾಮೀಜಿಗೆ ವಹಿಸಲಾಗಿದೆ.ಶಿವಮೂರ್ತಿ ಶ್ರೀಗಳನ್ನು ಮುರುಘಾ ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವ ಮುನ್ನ ಮಹಾಂತರುದ್ರ ಸ್ವಾಮೀಜಿಗಳ ಹೆಸರು ಮುಂಚೂಣಿಯಲ್ಲಿತ್ತು.
ಆದರೆ, ಮುರುಘಾ ರಾಜೇಂದ್ರ ಶಿಷ್ಯರಾಗಿದ್ದ ಶಿವಮೂರ್ತಿ ಶ್ರೀಗಳಿಗೆ ಮಠ ಪೀಠಾಧಿಪತಿಯ ಪಟ್ಟ ಒಲಿದು ಬಂದಿತು. ಆದರೆ, ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿ ಈಗ ನ್ಯಾಯಾಂಗ ಬಂಧನದಲ್ಲಿದ್ದರು, ಆದರೆ, ಈಗ ಹಿರಿಯ ಶ್ರೀಗಳು ಮಠದ ಉಸ್ತುವಾರಿಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ.