ರಾಜಕೀಯ

ಮುಗಿಯದ ಜನೋತ್ಸವ ಗೊಂದಲ, ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ

ಆಡಳಿತಾರೂಢ ಬಿಜೆಪಿ ಹಮ್ಮಿಕೊಂಡಿರುವ ಜನೋತ್ಸವ ಕಾರ್ಯಕ್ರಮಕ್ಕೆ ಬಿಟ್ಟು ಬಿಡದಂತೆ ವಿಘ್ನಗಳು ಎದುರಾಗುತ್ತಲೇ ಇವೆ. ಇಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಮುಂದೂಡಿ ಭಾನುವಾರ ನಡೆಸಲು ತೀರ್ಮಾನಿಸಲಾಗಿತ್ತು.

ಇದೀಗ ಬಿಜೆಪಿ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿ ಭಾನುವಾರದ ಬದಲಿಗೆ ಶನಿವಾರ ನಡೆಸಲು ಉದ್ದೇಶಿಸಿದ್ದು, ಜನೋತ್ಸವದ ಬದಲಿಗೆ ಜನಸ್ಪಂದನ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.

ಆದಾಗ್ಯೂ ಈ ಸಾಧನ ಸಮಾವೇಶದ ದಿನಾಂಕದ ಬಗ್ಗೆ ಸ್ವತಃ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದರೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ ಶನಿವಾರ 12 ಗಂಟೆಗೆ ನಡೆಯಲಿದೆ ಎಂದಿದ್ದಾರೆ.ಈ ನಡುವೆ ಜನೋತ್ಸವ ಕಾರ್ಯಕ್ರಮದ ಹೆಸರನ್ನು ಬದಲಾವಣೆ ಮಾಡಲಾಗಿದ್ದು ಜನಸ್ಪಂದನ ಕಾರ್ಯಕ್ರಮ ಎಂದು ಮರುನಾಮಕರಣ ಮಾಡಲಾಗಿದೆ.

ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ 3 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಲಾಯಿತು.

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿ ನಿಗದಿಯಂತೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿರುವ ಕುರಿತು ತಿಳಿಸಿದ್ದರು. ಈ ಬೆಳವಣಿಗೆಯ ಬಳಿಕ ಸೆಪ್ಟಂಬರ್ 8ಕ್ಕೆ ಮತ್ತೆ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ದೊಡ್ಡಬಳ್ಳಾಪುರದಲ್ಲಿ ಸಮಾವೇಶ ಯಶಸ್ವಿಗೊಳಿಸಲು ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು.

ಆದರೆ ಮಂಗಳವಾರ ರಾತ್ರಿ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾದರು.ಹೀಗಾಗಿ ಮತ್ತೆ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿ ಬಂತು. ಆರಂಭದಲ್ಲಿ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದರೂ ವಿರೋಧ ಪಕ್ಷಗಳ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಯಿತು.ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಘೋಷಣೆ ಮಾಡಿದರು.

ಇದಿಗ ಈ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಸಿಎಂ ಘೋಷಣೆ ಮಾಡಿದ್ದರೆ, ಶನಿವಾರ ಕಾರ್ಯಕ್ರಮ ನಡೆಯಲಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಜನಸ್ಪಂದನ ಕಾರ್ಯಕ್ರಮ ಭಾನುವಾರ ನಡೆಯಲಿದೆ ಎಂದು ಟ್ವೀಟ್‍ನಲ್ಲಿ ಘೋಷಿಸಿದ್ದಾರೆ.ಈ ನಡುವೆ ಜನೋತ್ಸವದ ಹೆಸರು ಜನಸ್ಪಂದನ ಎಂದು ಬದಲಾಗಿತ್ತು. ಇನ್ನು ಬಿಜೆಪಿ ಟ್ವೀಟ್ ಮಾಡಿದ್ದ ಆಹ್ವಾನ ಪತ್ರಿಕೆಯಲ್ಲಿ ಆರಂಭದಲ್ಲಿ ಸೆಪ್ಟಂಬರ್ 10 ಎಂದು ಉಲ್ಲೇಖಿಸಿದ್ದರೆ ನಂತರದಲ್ಲಿ ಸೆಪ್ಟಂಬರ್ 11 ಎಂದು ಬದಲಾಯಿಸಲಾಗಿದೆ.

ಒಟ್ಟಿನಲ್ಲಿ ಜನೋತ್ಸವ ಅಥವಾ ಜನಸ್ಪಂದನಾ ಸಮಾವೇಶ ಗೊಂದಲಕ್ಕೆ ಕಾರಣವಾಗಿದ್ದಂತೂ ನಿಜ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button