
ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಅನ್ನು ಕಳೆದ ರಾತ್ರಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಡೆದಿದ್ದರು. ಬಾಲಿವುಡ್ ನಟ ಶಾರೂಕ್ ಖಾನ್ ಹಾಗೂ ಅವರ ಜೊತೆಗಿದ್ದ ಕೆಲವರ ಬಳಿ ಪತ್ತೆಯಾಗಿದ್ದ ದುಬಾರಿ ಮೊತ್ತದ ವಾಚ್‌ಗಳು ಇದಕ್ಕೆ ಕಾರಣವಾಗಿತ್ತು.
ದುಬಾರಿ ಮೊತ್ತದ ವಾಚ್‌ಗಳನ್ನು ಇಟ್ಟುಕೊಂಡು ತಮ್ಮವರ ಜೊತೆಗೆ ಪ್ರಯಾಣಿಸುತ್ತಿದ್ದ ಶಾರೂಕ್ ಖಾನ್‌ರನ್ನು ಕಸ್ಟಮ್ಸ್ ಅಧಿಕಾರಿಗಳು ಪ್ರಶ್ನಿಸಿದರು.
ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡುವ ಮೊದಲು ಅವರು 6.83 ಲಕ್ಷ ರೂಪಾಯಿ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಾರ್ಜಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಟ ಶಾರೂಕ್ ಖಾನ್, ಖಾಸಗಿ ಜೆಟ್‌ನಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಬಂದಿಳಿದಿದ್ದರು.
ಇದೇ ವೇಳೆ ಶಾರೂಕ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್‌ನಿಂದ ಹೊರಡುವಾಗ ಲಗೇಜ್‌ನಲ್ಲಿ ಐಷಾರಾಮಿ ಕೈಗಡಿಯಾರಗಳು ಕಂಡುಬಂದಿದ್ದವು.
ವರದಿಗಳ ಪ್ರಕಾರ, ಶಾರೂಕ್ ಖಾನ್ ಮತ್ತು ಅವರ ಮ್ಯಾನೇಜರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಔಪಚಾರಿಕ ವಿಚಾರಣಗಳನ್ನು ಪೂರ್ಣಗೊಳಿಸಿದ ನಂತರ ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿ ನೀಡಿದರು.
ಆದರೆ ಅದೇ ಅವರ ಅಂಗರಕ್ಷಕ ಸೇರಿದಂತೆ ಅವರ ಪರಿವಾರದ ಕೆಲವು ಸದಸ್ಯರನ್ನು ಇಡೀ ರಾತ್ರಿ ವಿಚಾರಣೆಗಾಗಿ ಬಂಧಿಸಲಾಗಿದ್ದು, ಬೆಳಿಗ್ಗೆ ಹೊರಡಲು ಅನುಮತಿಸಲಾಯಿತು ಎಂದು ತಿಳಿಸಿದರು.18 ಲಕ್ಷ ಮೌಲ್ಯದ ಆರು ದುಬಾರಿ ವಾಚ್‌ಗಳು ಪತ್ತೆ
ಶಾರೂಕ್ ಖಾನ್ ಮತ್ತು ಅವರ ಜೊತೆಗಿದ್ದವರ ಪ್ಯಾಕೇಜಿಂಗ್‌ನಲ್ಲಿ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಆರು ದುಬಾರಿ ವಾಚ್‌ಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.
ಶಾರೂಕ್ ಖಾನ್ ನಿನ್ನೆ ಶಾರ್ಜಾ ಇಂಟರ್‌ನ್ಯಾಶನಲ್ ಬುಕ್ ಫೇರ್ 2022ರಲ್ಲಿ ಭಾಗವಹಿಸಿದ್ದರು, ಅಲ್ಲಿ ಅಂತರರಾಷ್ಟ್ರೀಯ ಸಿನಿಮಾ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.