ಅಪರಾಧರಾಷ್ಟ್ರಿಯಸಿನಿಮಾ

ಮುಂಬಯಿ ಕ್ರೂಸ್ ಶಿಪ್ ಮೇಲೆ ನಡೆದಿದ್ದ ಎನ್‌ಸಿಬಿ ದಾಳಿ ಪ್ರಕರಣ : ಶಾರುಖ್ ಖಾನ್ ಮಗ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್

ಹೊಸದಿಲ್ಲಿ: ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಖುಲಾಸೆಗೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮುಂಬಯಿಯ ಕ್ರೂಸ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಆರ್ಯನ್ ಖಾನ್ ಸೇರಿದಂತೆ ಅನೇಕರನ್ನು ಬಂಧಿಸಿತ್ತು. ಆದರೆ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಿಂದ ಆರ್ಯನ್ ಖಾನ್ ಅವರ ಹೆಸರನ್ನು ಎನ್‌ಸಿಬಿ ಕೈಬಿಟ್ಟಿದೆ.

ಸುಮಾರು 6 ಸಾವಿರ ಪುಟಗಳ ಆರೋಪಟ್ಟಿಯನ್ನು ಎನ್‌ಸಿಬಿ ಸಲ್ಲಿಸಿದೆ. ಅದರಲ್ಲಿ 14 ಆರೋಪಿಗಳನ್ನು ಹೆಸರಿಸಲಾಗಿದ್ದು, ಆರ್ಯನ್ ಖಾನ್ ಹೆಸರು ಇಲ್ಲ. 23 ವರ್ಷದ ಆರ್ಯನ್ ಖಾನ್‌ ಸೇರಿದಂತೆ 20 ಮಂದಿಯನ್ನು ಈ ದಾಳಿ ಸಂದರ್ಭದಲ್ಲಿ ಬಂಧಿಸಲಾಗಿತ್ತು.

ಆರ್ಯನ್ ಖಾನ್ ಮತ್ತು ಮೋಹಕ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳ ಬಳಿಯೂ ಮಾದಕ ವಸ್ತು ಪತ್ತೆಯಾಗಿವೆ. ಆರ್ಯನ್ ಖಾನ್ ಹಾಗೂ ಇತರೆ ಐವರ ವಿರುದ್ಧ ಸಾಕಷ್ಟು ಪುರಾವೆ ಸಂಗ್ರಹಿಸುವುದು ಸಾಧ್ಯವಾಗಿಲ್ಲ ಎಂದು ಎನ್‌ಸಿಬಿ ಆರೋಪಪಟ್ಟಿಯಲ್ಲಿ ಹೇಳಿದೆ. ಇದರೊಂದಿಗೆ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ದೊರೆತಂತಾಗಿದೆ.

ಎನ್‌ಸಿಬಿ ದಾಳಿ ಬಳಿಕ ಬಂಧಿತರಾಗಿದ್ದ ಆರ್ಯನ್ ಖಾನ್, ಮೂರು ವಾರಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಶಾರುಖ್ ಖಾನ್ ಮಗ ಮಾದಕವಸ್ತು ಪ್ರಕರಣದಲ್ಲಿ ಬಂಧಿತನಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆರ್ಯನ್ ಖಾನ್ ಮಾದಕ ವಸ್ತು ಬಳಕೆದಾರ ಹಾಗೂ ಪೂರೈಕೆದಾರ ಎಂದು ಎನ್‌ಸಿಬಿ ಈ ಹಿಂದೆ ಹೇಳಿತ್ತು.

ಆದರೆ ದಾಳಿ ವೇಳೆ ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ ಎಂದು ವಕೀಲರು ಪ್ರತಿಪಾದಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ, ಎನ್‌ಸಿಬಿಯ ವಾದಗಳನ್ನು ಪ್ರಶ್ನಿಸಿತ್ತು. ವಾಟ್ಸಾಪ್ ಸಂದೇಶಗಳನ್ನು ಕ್ಷುಲ್ಲಕ ಆರೋಪಗಳನ್ನು ಮಾಡಲು ಅವಲಂಬಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.

ತನಿಖೆಯ ನೇತೃತ್ವ ವಹಿಸಿದ್ದ ಅಧಿಕಾರಿ ಸಮೀರ್ ವಾಂಖೇಡೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆರ್ಯನ್ ಖಾನ್ ಅವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದ್ದು, ಹಾಗೂ ಆರೋಪಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಹೊರಿಸಲಾಗಿತ್ತು. ಬಳಿಕ ಮುಂಬಯಿ ಮೂಲದ ಎನ್‌ಸಿಬಿ ತಂಡದಿಂದ, ದಿಲ್ಲಿ ಮೂಲದ ಎನ್‌ಸಿಬಿ ತಂಡಕ್ಕೆ ತನಿಖೆಯನ್ನು ವರ್ಗಾಯಿಸಲಾಗಿತ್ತು.

“ಈ ಯುವಕನನ್ನು ಬಂಧಿಸಲು ಅಥವಾ ಆರೋಪ ಹೊರಿಸಲು ಯಾವುದೇ ಸಾಕ್ಷ್ಯ ಇರಲಿಲ್ಲ. ಅವರ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿರಲಿಲ್ಲ. ಎನ್‌ಸಿಬಿ ವೃತ್ತಿಪರವಾಗಿ ನಡೆದುಕೊಂಡಿದೆ ಮತ್ತು ತನ್ನ ತಪ್ಪನ್ನು ಒಪ್ಪಿಕೊಂಡಿರುವುದಕ್ಕೆ ಸಂತಸವಾಗುತ್ತಿದೆ. ಕೊನೆಗೂ ಸತ್ಯ ಹೊರಬಂದಿದೆ” ಎಂದು ಆರ್ಯನ್ ಖಾನ್ ಪರ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ. ಆರ್ಯನ್ ಖಾನ್ ಮತ್ತು ಅವರ ತಂದೆ ಶಾರುಖ್ ಖಾನ್‌ಗೆ ನೆಮ್ಮದಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ 2ರಂದು ಮುಂಬಯಿನ ಕ್ರೂಸ್ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ, ಆರ್ಯನ್ ಖಾನ್ ಸೇರಿದಂತೆ 20 ಮಂದಿಯನ್ನು ಬಂಧಿಸಿತ್ತು. ಸ್ನೇಹಿತ ಅರ್ಬಾಜ್ ಮೆರ್ಚೆಂಟ್ ಮತ್ತು ಮಾಡೆಲ್ ಮುನ್‌ಮೂನ್ ಧಮೇಚಾ ಜತೆ ಆರ್ಯನ್ ಖಾನ್ ಸಿಕ್ಕಿಬಿದ್ದಿದ್ದರು. ಅಕ್ಟೋಬರ್ 30ರಂದು ಅವರಿಗೆ ಜಾಮೀನು ದೊರಕಿತ್ತು.

120 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕಿದ್ದ ಎನ್‌ಸಿಬಿ, ಮಾರ್ಚ್‌ನಲ್ಲಿ ಮತ್ತೆ 90 ದಿನಗಳ ಕಾಲಾವಕಾಶ ಕೋರಿತ್ತು. ಮೊದಲು ಏಪ್ರಿಲ್ 2ರ ಗಡುವು ನೀಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button