ಮುಂದುವರೆದ ಮಳೆ ಅವಾಂತರ, ಗೋಡೆ ಕುಸಿದು ವೃದ್ಧೆ ಸಾವು

ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು , ಭಾರೀ ಅವಾಂತರಗಳು ಸಂಭವಿಸುತ್ತಲೇ ಇದ್ದು, ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನಾದ್ಯಂತ ರಾತ್ರಿ ಸುರಿದ ಮಳೆಗೆ ಹೀರೆಹಾಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಲಕ್ಷ್ಮಮ್ಮ ಮದಾರ (90) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ ಚಿಕ್ಕಬಳ್ಳಾಪುರ, ರಾಮನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ ,ಮಂಡ್ಯ, ಮೈಸೂರು, ಬಾಗಲಕೋಟೆ, ರಾಯಚೂರು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹಕ್ಕೆ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ನದಿಯಿಂದ ಜಮೀನಿಗೆ ನೀರು ಹಾಯಿಸಲು ಹಾಕಲಾಗಿದ್ದ ಪಂಪು ಮೋಟಾರ್ ತೆಗೆದುಕೊಂಡು ಬರಲು ಹೋಗಿದ್ದಾಗ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೊಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾಗಿರುವ ಯುವಕನ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮತ್ತೊಂದೆಡೆ ಗುಳೇದಗುಡ್ಡದ ಸೇತುವೆ ಮುಳುಗಡೆಯಾಗಿದ್ದು, ಜೆಸಿಬಿ ಮೂಲಕ ವಿದ್ಯಾರ್ಥಿಗಳು ನದಿ ದಾಟಿ ಶಾಲಾ-ಕಾಲೇಜುಗಳಿಗೆ ತೆರಳುವಂತಾಗಿತ್ತು. ಇನ್ನು ಮಳೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ಸೇತುವೆಗಳು ಕೊಚ್ಚಿ ಹೋಗಿವೆ.
ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯಲ್ಲಿ ಸೇತುವೆ ಕೊಚ್ಚಿಹೋಗಿ ಸಂಪರ್ಕಕಡಿತವಾಗಿದೆ.ಹಲವೆಡೆ ಜಮೀನುಗಳಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿ ಬೆಳೆಗಳು ನಾಶವಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿರಂತರ ಮಳೆಯಿಂದ ಮನೆಯ ಗೋಡೆಗಳಿಗೆ ನೀರು ಇಳಿದು ಹಳೆ ಮನೆಗಳು ಕುಸಿಯಲಾರಂಭಿಸಿವೆ.ಈಗಾಗಲೇ ಮಹಾಮಳೆಗೆ ಬೆಂಗಳೂರು ತತ್ತರಿಸಿದ್ದು, ಮತ್ತೆ ನಾಲ್ಕು ದಿನಗಳು ಮಳೆಯಾಗುವ ಸಾಧ್ಯತೆಗಳಿದ್ದು, ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
ಒಟ್ಟಿನಲ್ಲಿ ಮಳೆ ತಂದ ಅವಾಂತರದಿಂದ ಜನಜೀವನ ಸಂಪೂರ್ಣವಾಗಿ ಅಸ್ತವಸ್ತವಾಗಿದ್ದು, ಕೈಗೆ ಬಂದ ಬೆಳೆ ಕಳೆದುಕೊಂಡು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದರೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಎಲ್ಲಾ ವಸ್ತುಗಳು ಹಾಳಾಗಿದ್ದು, ನಗರದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.