
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮೊದಲ ಮಳೆಯಾಗಿದೆ. ನೆನ್ನೆ ಸಂಜೆ ಸತತ 30 ನಿಮಿಷಗಳ ಕಾಲ ಸುರಿದ ಭಾರಿ ಮಳೆಗೆ ರಾಜಧಾನಿ ತೊಯ್ದು ತೊಪ್ಪೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡು, ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಹೆಬ್ಬಾಳ, ಯಲಹಂಕ, ಯಶವಂತಪುರ, ಶಿವಾಜಿನಗರ, ಕೆ.ಆರ್.ಮಾರ್ಕೆಟ್ ಸೇರಿದಂತೆ ಹಲವಡೆ ಭಾರೀ ಮಳೆಯಾಗಿದೆ. ಶೇಷಾದ್ರಿಪುರಂ ಸೇರಿದಂತೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದು ಬಿಬಿಎಂಪಿ ಕಾರ್ಯಕ್ಕೆ ಇಡೀ ಶಾಪ ಹಾಕಿದ್ದಾರೆ.

ಆನೇಕಲ್ ಪಟ್ಟಣ ಸೇರಿದಂತೆ ಬನ್ನೇರುಘಟ್ಟ ಮತ್ತು ಅತ್ತಿಬೆಲೆ ಚಂದಾಪುರ ಎಲೆಕ್ಟ್ರಾನ್ ಸಿಟಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದ ಹಲವೆಡೆ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಗುಡುಗು ಸಿಡಿಲಿನ ಆರ್ಭಟಕ್ಕೆ ಜನ ಬೆಚ್ಚಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮಗಳು, ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ ಪಟ್ಟಣ ಹಾಗೂ ಕೋಲಾರ ಜಿಲ್ಲೆಯ ಹಲವಡೆ ಭಾರೀ ಮಳೆಯಾಗಿದೆ. ಕೋಲಾರ ಜಿಲ್ಲೆಯ ಮುಳುಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಕೋಲಾರ ತಾಲೂಕುಗಳಲ್ಲಿಯೂ ಹೆಚ್ಚಿನ ಮಳೆಯಾಗಿದ್ದು ಬಂಗಾರಪೇಟೆ, ಮಾಲೂರು ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.