ಅಂತಾರಾಷ್ಟ್ರೀಯ

ಮಾಲ್ಡೀವ್ಸ್‌ಗೆ ಪರಾರಿಯಾದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ

ಕೊಲಂಬೋ: ತಮ್ಮ ವಿರುದ್ಧದ ಬೃಹತ್ ಪ್ರತಿಭಟನೆಗಳ ನಡುವೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಾಲ್ಡೀವ್ಸ್‌ಗೆ ಜಿಗಿದಿದ್ದಾರೆ. ಗೊಟಬಯ ಅವರು ಬುಧವಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಮುನ್ನ ತಮ್ಮ ಸುರಕ್ಷತೆಗಾಗಿ ಅವರು ದೇಶದಿಂದ ಪರಾರಿಯಾಗಿದ್ದಾರೆ. ಅವರನ್ನು ಮಾಲೆಯ ವೆಲಾನಾ ವಿಮಾನ ನಿಲ್ದಾಣದಲ್ಲಿ ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ಬುಧವಾರ ಮುಂಜಾನೆ ಬರಮಾಡಿಕೊಂಡರು.


ಅಧ್ಯಕ್ಷ ಗೊಟಬಯ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿ ಸೇನಾ ವಿಮಾನ ಏರಿ ಮಾಲೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಂತೆಯೇ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದ್ದ ಅವರ ಸಹೋದರ ಮತ್ತು ಮಾಜಿ ಸಚಿವ ಬಸಿಲ್ ರಾಜಪಕ್ಸ್ ಕೂಡ ದೇಶ ತೊರೆದಿದ್ದಾರೆ ಎನ್ನಲಾಗಿದೆ.

ರಾಜಪಕ್ಸ ಅವರು ಅಧ್ಯಕ್ಷರಾಗಿ ಇರುವ ಅವಧಿಯವರೆಗೂ ಶ್ರೀಲಂಕಾ ರಕ್ಷಣಾ ಪಡೆಗಳ ಸರ್ವೋಚ್ಛ ಕಮಾಂಡರ್ ಆಗಿರುತ್ತಾರೆ. ಹೀಗಾಗಿ ಅವರ ಮನವಿಯಂತೆ ಕಳೆದ ರಾತ್ರಿ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಅಧ್ಯಕ್ಷರ ಸೂಚನೆಯನ್ನು ಪಾಲಿಸುವುದು ತಮ್ಮ ಕರ್ತವ್ಯವಾಗಿತ್ತು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲ್ಡೀವ್ಸ್‌ಗೆ ಆಗಮಿಸಿದ ಗೊಟಬಯ, ಅವರ ಪತ್ನಿ ಮತ್ತು ಅಂಗರಕ್ಷಕರನ್ನು ಪೊಲೀಸ್ ಬೆಂಗಾವಲಿನಲ್ಲಿ ಗೋಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ದಾರೆ.

ಗೊಟಬಯ ಮತ್ತು ಅವರ ಸಹೋದರ ಬಸಿಲ್ ರಾಜಪಕ್ಸ ಅವರು ಲಂಕಾದಿಂದ ಪರಾರಿಯಾಗಲು ಭಾರತ ಸಹಾಯ ಮಾಡಿದೆ ಎಂಬ ವರದಿಗಳನ್ನು ಶ್ರೀಲಂಕಾದಲ್ಲಿನ ಭಾರತೀಯ ಹೈ ಕಮಿಷನ್ ತಿರಸ್ಕರಿಸಿದೆ. “ಗೊಟಬಯ ರಾಜಪಕ್ಸ, ಬಸಿಲ್ ರಾಜಪಕ್ಸ ಅವರು ಶ್ರೀಲಂಕಾದಿಂದ ಹೊರಗೆ ಹೋಗಿದ್ದಾರೆ ಎಂದು ಇತ್ತೀಚೆಗೆ ವರದಿಯಾದ ಪ್ರಯಾಣಕ್ಕೆ ಭಾರತ ಅನುಕೂಲ ಮಾಡಿಕೊಟ್ಟಿದೆ ಎಂಬ ಮಾಧ್ಯಮಗಳ ಆಧಾರರಹಿತ ಮತ್ತು ಊಹಾತ್ಮಕ ವರದಿಗಳನ್ನು ಹೈ ಕಮಿಷನ್ ನಿರ್ದಿಷ್ಟವಾಗಿ ತಿರಸ್ಕರಿಸುತ್ತದೆ. ಭಾರತವು ಶ್ರೀಲಂಕಾದ ಜನತೆಗೆ ತನ್ನ ಸಹಾಯವನ್ನು ಮುಂದುವರಿಸುತ್ತದೆ ಎಂದು ಪುನರುಚ್ಚರಿಸುತ್ತದೆ” ಎಂಬುದಾಗಿ ಟ್ವೀಟ್ ಮಾಡಿದೆ.
ಗೊಟಬಯ ಅವರು ‘ಶಾಂತಯುತ ಅಧಿಕಾರ ಹಸ್ತಾಂತರ’ ಪ್ರಕ್ರಿಯೆಗೆ ಸ್ಪಷ್ಟ ಹಾದಿ ನಿರ್ಮಿಸಲು ಬುಧವಾರ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಜುಲೈ 20ರಂದು ಸರ್ವಪಕ್ಷ ಸರ್ಕಾರ ರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಮಾಡಲು ರಾಜಕೀಯ ಪಕ್ಷಗಳು ತಯಾರಿ ನಡೆಸಿವೆ.

ಅಧ್ಯಕ್ಷರಾಗಿ ಗೊಟಬಯ ಅವರಿಗೆ ಬಂಧನದಿಂದ ರಕ್ಷಣೆ ಇದೆ. ಒಂದು ವೇಳೆ ದೇಶದ ಒಳಗೇ ಇದ್ದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಜತೆಗೆ ಸಾಂವಿಧಾನಿಕ ರಕ್ಷಣೆಗಳು ಇಲ್ಲದಿರುವುದರಿಂದ ಜನರಿಂದ ದಾಳಿಗೆ ಒಳಗಾಗುವ ಭೀತಿ ಕೂಡ ಅವರಲ್ಲಿದೆ. ಹೀಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ರಾಜೀನಾಮೆಗೂ ಮುನ್ನ ವಿದೇಶಕ್ಕೆ ತೆರಳಲು ಅವರು ಬಯಸಿದ್ದರು ಎನ್ನಲಾಗಿದೆ.
ಇದಕ್ಕೂ ಮುನ್ನ ಗೊಟಬಯ ಮತ್ತು ಬಸಿಲ್ ಸಹೋದರರು ಮಂಗಳವಾರ ನಸುಕಿನಲ್ಲಿ ಕೊಲಂಬೋ ಏರ್‌ಪೋರ್ಟ್‌ನಿಂದ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ವಲಸೆ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ದುಬೈಗೆ ಪ್ರಯಾಣಿಸಲು ಹೊರಟಿದ್ದ ಬಸಿಲ್ ಅವರನ್ನು ಗುರುತಿಸಿದ್ದ ಜನರು, ಅವರನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button