
ಪಂಜಾಬ್ : ಖ್ಯಾತ ಗಾಯಕ ದಲೇರ್ ಮೆಹಂದಿ ಜೈಲುಪಾಲಾಗಿದ್ದಾರೆ. 2003ರ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲೇರ್ ಮೆಹಂದಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ದಲೇರ್ ಮೆಹಂದಿ ಅವರನ್ನು ಇದೀಗ ಬಂಧಿಸಲಾಗಿದೆ.

ಎರಡು ದಶಕಗಳ ಹಿಂದಿನ ಪ್ರಕರಣ..
ಅಂದ್ರೆ 2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪಟಿಯಾಲ ನ್ಯಾಯಾಲಯ ಗುರುವಾರ ಶಿಕ್ಷೆ ವಿಧಿಸಿದೆ. ಗಾಯಕ ದಲೇರ್ ಮೆಹಂದಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿ, ಜೈಲು ಶಿಕ್ಷೆ ಆದೇಶಿಸಿದೆ.
ದಲೇರ್ ಮೆಹಂದಿ ದೋಷಿ
2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್ ಮೆಹಂದಿ ಅವರನ್ನು ದೋಷಿ ಎಂಬ ಸಂಗತಿಯನ್ನು ಪಟಿಯಾಲದ ಜಿಲ್ಲಾ ನ್ಯಾಯಾಲಯವು ಇಂದು ಎತ್ತಿಹಿಡಿದಿದೆ. ದಲೇರ್ ಮೆಹಂದಿ ಅವರನ್ನು ತಕ್ಷಣವೇ ಬಂಧಿಸುವಂತೆ ನ್ಯಾಯಾಧೀಶ ಎಚ್.ಎಸ್.ಗ್ರೆವಾಲ್ ಅವರು ಆದೇಶ ನೀಡಿದರು.

ಅಂದ್ಹಾಗೆ, ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿವೆ.
ಏನಿದು ಪ್ರಕರಣ?
ಬಕ್ಷೀಶ್ ಸಿಂಗ್ ನೀಡಿದ ದೂರಿನ ಮೇರೆಗೆ ದಲೇರ್ ಮೆಹಂದಿ ಹಾಗೂ ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಪಟಿಯಾಲ ಪೊಲೀಸರು ದೂರು ದಾಖಲಿಸಿಕೊಂಡರು. ಅಕ್ರಮವಾಗಿ ಯುಎಸ್‌ಗೆ ವಲಸೆ ಹೋಗುವವರಿಂದ ದಲೇರ್ ಮೆಹಂದಿ ಮತ್ತು ಸಹೋದರ ‘ಪ್ಯಾಸೇಜ್ ಮನಿ’ ತೆಗೆದುಕೊಂಡಿದ್ದಾರೆ ಎಂದು ದೂರಲಾಗಿತ್ತು. ಇದಲ್ಲದೆ, ದಲೇರ್ ಮೆಹಂದಿ ತನ್ನನ್ನು ಕೆನಡಾಕ್ಕೆ ಕರೆದೊಯ್ಯಲು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಬಕ್ಷೀಶ್ ಸಿಂಗ್ ಆರೋಪಿಸಿದ್ದರು.
ಸಂಗೀತ ಕಾರ್ಯಕ್ರಮ ನಡೆಸಿಕೊಡಲು ವಿದೇಶಕ್ಕೆ ಹೋಗುವಾಗ ತಮ್ಮ ತಂಡದವರೆಂದು ಹೇಳಿ ದಲೇರ್ ಮೆಹಂದಿ ಹಾಗೂ ಶಂಶೀರ್ ಸಿಂಗ್ ಮಾನವ ಕಳ್ಳಸಾಗಣೆ ಮಾಡುತ್ತಿದ್ದರು. ಇದಕ್ಕಾಗಿ ತಮ್ಮ ಬಳಿ ಒಂದು ಕೋಟಿ ರೂಪಾಯಿ ಪಡೆದಿದ್ದು, ಅದನ್ನು ಹಿಂದಿರುಗಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ದಲೇರ್ ಮೆಹಂದಿಗೆ ಪಟಿಯಾಲ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಜೊತೆಗೆ 1000 ರೂಪಾಯಿ ದಂಡವನ್ನು ಹಾಕಿತ್ತು. ಆನಂತರ ದಲೇರ್ ಮೆಹಂದಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ತೀರ್ಪನ್ನು ಮರು ಪರಿಶೀಲಿಸುವಂತೆ ಪಟಿಯಾಲ ಕೋರ್ಟ್‌ಗೆ ಜಾಮೀನಿನ ಮೇಲೆ ಹೊರಬಂದಿದ್ದ ದಲೇರ್ ಮೆಹಂದಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಾಲಯ ಇದೀಗ ಹಳೆಯ ತೀರ್ಪನ್ನೇ ಎತ್ತಿ ಹಿಡಿದಿದೆ. ದಲೇರ್ ಮೆಹಂದಿ ಅವರಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.