ಮಾದಕ ವಸ್ತು ಸಂಗ್ರಹ-ಮಾರಾಟ: ಕೇರಳಿಗರಿಗೆ 10 ವರ್ಷ ಜೈಲು,1 ಲಕ್ಷ ದಂಡ
Drug sale Kerala 10 years jail 1 lakh fine

ಮಾದಕವಸ್ತು ಆ್ಯಶಿಶ್ ಆಯಿಲ್‍ನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟಕ್ಕೆ ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರಿಗೆ 33ನೇ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ ಜಡ್ಜ್(ಎನ್‍ಡಿಪಿಎಸ್) ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೇರಳ ಮೂಲದ ಜಾನ್ಸನ್ ಜೋಸೆಫ್(31) ಮತ್ತು ಬಿಜು ಅಬ್ರಾಹಂ(38) ಶಿಕ್ಷೆಗೊಳಗಾದವರು. ನ್ಯಾಯಾಲಯ ವಿಧಿಸಿರುವ ದಂಡ ಭರಿಸಲು ತಪ್ಪಿದಲ್ಲಿ ಪುನಃ 2 ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿರುತ್ತದೆ.
2017, ಜುಲೈ 7ರಂದು ಅಂದಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಂದಿನ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಯೋಗೇಂದ್ರನಾಥ ಸಮಕ್ಷಮದಲ್ಲಿ ಆರೋಪಿಗಳ ವಶದಲ್ಲಿದ್ದ 6 ಕೆಜಿ 377 ಗ್ರಾಂ ತೂಕದ ಮಾದಕ ವಸ್ತು ಆ್ಯಶಿಶ್ ಆಯಿಲ್‍ನ್ನು ವಶಡಿಸಿಕೊಂಡು, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕರಾದ ಬಶೀರ್ ಅಹ್ಮದ್ ಮಕಂದರ್ ಅವರು ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತನಿಖಾ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ.