ರಾಜ್ಯ

ಮಾಜಿ ಶಿಕ್ಷಣ ಸಚಿವ ಎಂ.ರಘುಪತಿ ನಿಧನ

ಜನತಾ ಪರಿವಾರದ ಹಿರಿಯ ಕೊಂಡಿ ಹಾಗೂ ಮಾಜಿ ಸಚಿವ ಎಂ.ರಘುಪತಿ ಅವರು ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.

ಇವರ ಅಗಲಿಕೆಯಿಂದ ಜನತಾ ಪರಿವಾರದ ಇನ್ನೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ. ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಮುಂಜಾನೆ 3 ಗಂಟೆಗೆ ರಘುಪತಿ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊಂಚ ಗುಣಮುಖರಾಗಿ ನಿವಾಸಕ್ಕೆ ಹಿಂದಿರುಗಿದ್ದ ಅವರು ಆರೋಗ್ಯ ಸ್ಥಿತಿ ಸುಧಾರಿಸದೆ ಇಂದು ಬೆಳಗಿನ ಜಾವ 3 ಗಂಟೆಗೆ ತಮ್ಮ ಮಲ್ಲೇಶ್ವರದ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಮಕೃಷ್ಣ ಹೆಗಡೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಘುಪತಿ ಅವರು ನಂತರ ಲೋಕಶಕ್ತಿ ಪ್ರಾದೇಶಿಕ ಪಕ್ಷವನ್ನು ಕಟ್ಟಿದಾಗ ಜನತಾ ಪರಿವಾರವನ್ನು ಬಿಟ್ಟು ಹೆಗಡೆ ಅವರಿಗೆ ಸಾಥ್ ನೀಡಿದರು.

ಜನತಾ ಪರಿವಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಘುಪತಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್‍ಟಿ ರಾಮರಾವ್‍ಗೆ ಆತ್ಮೀಯರಾಗಿದ್ದರು.

ಮಲ್ಲೇಶ್ವರ, ಶಿವಾಜಿನಗರ ವಿಧಾನಸಭೆ ಕ್ಷೇತ್ರಗಳಿಂದ ಶಾಸಕರಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ನಂತರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸಿ ಪರಾಭವಗೊಂಡಿದ್ದರು. ಬಳಿಕ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದರು.ಗಣ್ಯರ ಸಂತಾಪ: ಮಾಜಿ ಸಚಿವ ಎಂ.ರಘುಪತಿ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ವಿವಿಧ ಮುಖಂಡರು ಕಂಬನಿ ಮಿಡಿದಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button