ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ: ಪಕ್ಕದ ಮನೆಯ ಮಹಿಳೆಯೊಬ್ಬಳ ಮೇಲೆ ಕಣ್ಣು ಹಾಕಿದ ಕಿರಾತಕನೊಬ್ಬ ಆಕೆಯ ಗಂಡನನ್ನು ತನ್ನ ಮನೆಯ ಕಾರು ಚಾಲಕನನ್ನಾಗಿ ಮಾಡಿಕೊಂಡು, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಮೌಲಾಸಾಬ್ ಮಹ್ಮದ್ ಸಾಬ್ ಹುಲಸೂರ ಎಂಬ ಕಾಮುಕನ ವಿರುದ್ಧ ಮಹಿಳೆ ಈಗ ದೂರು ದಾಖಲಿಸಿದ್ದಾರೆ.
ಮಹಿಳೆಗಿಂತಲೂ ಚಿಕ್ಕವನಾಗಿರುವ ಮೌಲಾಸಾಬ್ ಆಕೆಯ ಮೇಲೆ ಕಣ್ಣು ಹಾಕಿ ಹೇಗಾದರೂ ಅವಳನ್ನು ತನ್ನವಳನ್ನಾಗಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದ. ಇದಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಈ ಕಾಮುಕ ಬಹಳ ಯೋಚನೆ ಮಾಡಿ ಆಕೆಯ ಗಂಡನನ್ನು ತನ್ನ ಕಾರಿನ ಚಾಲಕ ಮಾಡಿಕೊಂಡ. ಇವನ ಈ ದುಷ್ಕೃತ್ಯ ಅರಿಯದ ಮಹಿಳೆಯ ಗಂಡ ಕೆಲಸ ಸಿಕ್ಕಿತೆಂದು ಖುಷಿಯಿಂದ ಇದ್ದ.
ಆದರೆ ಮೌಲಾಸಾಬ್ನ ಉದ್ದೇಶವೇ ಬೇರೆಯಾಗಿತ್ತು. ಕೆಲಸದ ನಿಮಿತ್ತ ಪದೇ ಪದೇ ಆಕೆಯ ಗಂಡನನ್ನು ಬೇರೆ ಊರಿಗೆ ಕಳುಹಿಸುತ್ತಿದ್ದ. ಅಷ್ಟೇ ಅಲ್ಲದೇ ವಾಮಾಚಾರವನ್ನೂ ಕಲಿತಿದ್ದ ಮೌಲಾಸಾಬ್, ಮಹಿಳೆ ಒಂಟಿಯಾಗಿರುವಾಗಿ ಮನೆಗೆ ನುಗ್ಗಿ ಅತ್ಯಾಚಾರ ಎಸಗುತ್ತಿದ್ದ. ಎರಡು ತಿಂಗಳು ಹೀಗೆಯೇ ಮಾಡಿದ್ದಾನೆ. ಅದರ ವಿಡಿಯೋ ಕೂಡ ಮಾಡಿಕೊಂಡು ಯಾರಿಗಾದರೂ ಹೇಳಿದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೇ ಕಾರು ಚಲಾಯಿಸಿಕೊಂಡು ಹೋಗಿರೋ ಗಂಡನನ್ನು ಮರ್ಡರ್ ಮಾಡಿಸ್ತೇನೆ ಎಂದೂ ಹೆದರಿಸುತ್ತಿದ್ದ.
ಈತನ ನೀಚತನ ಹೆಚ್ಚಾಗಿದ್ದರಿಂದ ಮಹಿಳೆ ಈಗ ದೂರು ದಾಖಲು ಮಾಡಿದ್ದಾರೆ. ಆದರೆ ಪ್ರಕರಣ ದಾಖಲಿಸಿ 25 ದಿನ ಕಳೆದರೂ ಇದುವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ. ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿಗೇ ಧಮ್ಕಿಗಳ ಮೇಲೆ ಧಮ್ಕಿ ಹಾಕಲಾಗಿದೆ. ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ, ಊರಿಗೇ ಊಟ ಹಾಕೋದಾಗಿ ಬೆದರಿಕೆಗಳು ಬಂದಿವೆ ಎನ್ನಲಾಗುತ್ತಿದೆ. ಇದರಿಂದ ಬೆದರಿದ ಮಹಿಳೆ, ಪತಿ ಹಾಗೂ ಕುಟುಂಬದವರು ಊರನ್ನೇ ತೊರೆದಿದ್ದಾರೆ ಎನ್ನಲಾಗುತ್ತಿದೆ. ಹುಬ್ಬಳ್ಳಿ ಮಹಿಳಾ ಠಾಣೆ ಹಾಗೂ ಕಲಘಟಗಿ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗುತ್ತಿತ್ತು. ಈ ಕುಟುಂಬ ಕಂಗಾಲಾಗಿ ಹೋಗಿದೆ.