
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿವರ ಹಾಗೂ ಇನ್ನಿತರ ಫೋಟೊ- ವಿಡಿಯೋ ಪೋಸ್ಟ್ ಮಾಡಬೇಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ.
ಸದ್ಯ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕ್ರಿಮಿಗಳು ಮಹಿಳೆಯರ ನಗ್ನ-ಅರೆನಗ್ನ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಇದೇ ರೀತಿ ಹಣಕ್ಕಾಗಿ ಮಹಿಳೆಗೆ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.ಭುವನೇಶ್ವರಿ ನಗರದ ಮಹಾಂತೇಶ್ ಬಂಧಿತ ಆರೋಪಿ.
ಈತ ಡೇಟಿಂಗ್ ಆ್ಯಪ್ ಆಗಿರುವ ಟ್ಯಾಂಗೋ ಸದಸ್ಯನಾಗಿದ್ದ. ಈ ಆ್ಯಪ್ ನಲ್ಲಿ ಅಪರಿಚಿತರೊಂದಿಗೂ ವಿಡಿಯೊ ಚಾಟ್ ಮಾಡಬಹುದಾಗಿದೆ.
ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ಆ್ಯಪ್ ನಲ್ಲಿ ಮಹಿಳೆಯರ ನಗ್ನ-ಅರೆನಗ್ನ ಫೋಟೊ ಹಾಗೂ ವಿಡಿಯೊಗಳನ್ನು ಸ್ಕ್ರಿನ್ ಶಾಟ್ ತೆಗೆದುಕೊಂಡು ಮಹಿಳೆಯ ಮೊಬೈಲ್ ನಂಬರ್ ಸಂಗ್ರಹಿಸಿದ್ದ.
ಬಳಿಕ ಮಹಿಳೆಗೆ ಕರೆ ಮಾಡಿ ‘ನಿನ್ನ ಏಕಾಂತದ ಫೋಟೊ ಹಾಗೂ ವಿಡಿಯೋ ನನ್ನ ಬಳಿಯಿದೆ ಎಂದು 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ.
30 ಲಕ್ಷ ರೂಪಾಯಿ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ’ ಬ್ಲ್ಯಾಕ್ ಮೇಲ್ ಮಾಡಿದ್ದ. ಆರೋಪಿಯ ಈ ಕೃತ್ಯದಿಂದ ಆತಂಕಗೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದಾಳೆ.
ಮಹಿಳೆಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.