ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿ ರದ್ದು ಮಾಡಿದ್ಯಾಕೆ?

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿರುವಾಗಲೇ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಬುರಾಜ್ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಬೆಳಗಾವಿಗೆ ಆಗಮಿಸಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದರು.
ಬೆಳಗಾವಿಗೆ ಬಂದು ಎಂಇಎಸ್ ಪುಂಡರ ಭೇಟಿಯಾಗಿ ನಗರದಲ್ಲಿ ಕೆಲವು ಕಡೆ ಪ್ರದಕ್ಷಿಣೆ ಹಾಕುತ್ತೇವೆ ,ಯಾರು ನಮ್ಮನ್ನು ತಡೆಯಲಾಗುವುದಿಲ್ಲ ಎಂದಿದ್ದರು. ಆದರೆ ಈಗ ನಿಲುವು ಬದಲಾಯಿಸಿ ಬೆಳಗಾವಿ ಭೇಟಿ ರದ್ದು ಮಾಡಿದ್ದಾರೆ.ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದು ಆಗಿದೆ ಎಂದು ಸಚಿವ ಶಂಭುರಾಜ್ ದೇಸಾಯಿ ತಿಳಿಸಿದ್ದಾರೆ.
ಬೆಳಗಾವಿ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಇಂದಿನ ಬೆಳಗಾವಿ ಭೇಟಿ ರದ್ದುಗೊಳಿಸಿದ್ದೇವೆ. ಇಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ. ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಭೇಟಿ ರದ್ದು ಮಾಡಿದ್ದೇವೆ. ಶ್ರದ್ಧಾಂಜಲಿ ಸಲ್ಲಿಕೆಗೆ ನಮಗೆ ಅನುಮತಿ ನೀಡಬಹುದಿತ್ತು.
ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದ್ರೆ ಒಳ್ಳೆಯದಾಗುತ್ತಿತ್ತು. ಅನುಮತಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ.ಮಹಾ ಸಚಿವರು ಬೆಳಗಾವಿಗೆ ಆಗಮಿಸಬಾರದು ಎಂದು ಸಿಎಂ ಬೊಮ್ಮಾಯಿ, ರಾಜ್ಯ ಸಚಿವರು ಹೇಳಿದ್ದು, ಬೆಳಗಾವಿ ಡಿಸಿ ನಿರ್ಬಂಧ ಹೇರಿದ್ದರು.
ಬೆಂಗಳೂರಿನಿಂದ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಹೋರಾಟಗಾರರು ಬೆಳಗಾವಿಯತ್ತ ಹೊರಟಿದ್ದಾರೆ. ಇದರ ನಡುವೆ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿಯನ್ನು ರದ್ದು ಮಾಡಿದ್ದಾರೆ.