ಮಸೀದಿ ವಿವಾದ: ಶ್ರೀರಂಗಪಟ್ಟಣ ಸುತ್ತಮುತ್ತ ಖಾಕಿ ಸರ್ಪಗಾವಲು
Section 144 CrPC imposed in Srirangapatna

ಜಾಮೀಯ ಮಸೀದಿ ವಿವಾದ ತಾರಕಕ್ಕೇರಿದ್ದು, ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ಹಮ್ಮಿ ಕೊಂಡಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ಮೆರವಣಿಗೆ, ರ್ಯಾಲಿ, ಧರಣಿ ನಿಷೇಧಿಸಿ ನಿಷೇಧಾಜ್ಞೆಯನ್ನು ನಿನ್ನೆಯಿಂದಲೇ ಜಾರಿಗೊಳಿಸಲಾಗಿದೆ.
ಯಾವುದೇ ನಿರ್ಬಂಧ ವಿಧಿಸಿದರೂ ನಾವು ರ್ಯಾಲಿ ನಡೆಸೇ ನಡೆಸುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಹಿನ್ನೆಲೆಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದ ಜಾಮೀಯ ಮಸೀದಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮೈಸೂರು ರಸ್ತೆ, ಕಿರಂಗೂರು ಸೇರಿದಂತೆ ಐದು ಕಡೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಾಣ ಮಾಡಿ ಪೋಲೀಸರು ಬರುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಭದ್ರತೆಗಾಗಿ ಎಸ್‍ಪಿ, 2 ಡಿವೈಎಸ್‍ಪಿ, 5 ಸಿಪಿಐ, 10 ಪಿಎಸ್‍ಐ, 300 ಪೊಲೀಸ್ ಕಾನ್‍ಸ್ಟೆಬಲ್, 4 ಡಿಆರ್, 2 ಕೆಎಸ್‍ಆರ್‍ಪಿ ಫ್ಲಟೂನ್‍ಗಳನ್ನು ನಿಯೋಜನೆ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ನಿನ್ನೆ ರೂಟ್ ಮಾರ್ಚ್ ನಡೆಸಿ ನಾಗರಿಕರಿಗೆ ಪೊಲೀಸರು ಅಭಯ ನೀಡಿದ್ದಾರೆ.
ಜಾಮೀಯ ಮಸೀದಿಯೊಳಗೆ ದೇಗುಲ ಮಾದರಿಯ ಕುರುಹುಗಳು ಪತ್ತೆಯಾಗಿವೆ. ಅನಕೃತ ಮದರಸಾ ಖಾಲಿ ಮಾಡಿಸಿ ವಿಡಿಯೋ ಸರ್ವೆಗೆ ಅನುಮತಿ ನೀಡಿ. ಪೂಜೆಗೆ ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದಕ್ಕಾಗಿ ಹತ್ತಾರು ಬಾರಿ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದರೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಅದಕ್ಕಾಗಿ ನಾವು ಶ್ರೀರಂಗಪಟ್ಟಣ ಮಂದಿರ ಚಲೋ ಹಮ್ಮಿಕೊಂಡಿದ್ದೇವೆ. ನಿಷೇಧಾಜ್ಞೆ ನಡುವೆಯೂ ಕೂಡ ನಾವು ಮಾಡಿಯೇ ತೀರುತ್ತೇವೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಕರಪತ್ರ ಹಂಚಲಾಗಿದೆ. ಕುವೆಂಪು ಪ್ರತಿಮೆಯಿಂದ ಜಾಮೀಯ ಮಸೀದಿವರೆಗೆ ಮೆರವಣಿಗೆ ನಡೆಸುತ್ತೇವೆ. ಅದಕ್ಕೆ ಅವಕಾಶ ದೊರೆಯದಿದ್ದರೆ 2000 ಹನುಮಧಾರಿಗಳೊಂದಿಗೆ ಹನುಮ ಚಾಲೀಸ ಪಠಣ ಮಾಡುವ ಮೂಲಕ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.ವಕ್ ಬೋರ್ಡ್ ಕಾರ್ಯದರ್ಶಿ ಇಫ್ರಾನ್ ಮಾತನಾಡಿ, ಇಲ್ಲಿ ಹಿಂದು-ಮುಸ್ಲಿಂ ಸೌಹಾರ್ದಯುತವಾಗಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಹಿಂದೂಪರ ಸಂಘಟನೆಯವರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಾವು ಮಸೀದಿ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಾನೂನು ಉಲ್ಲಂಘನೆಗೆ ಅವಕಾಶ ನೀಡಲ್ಲ: ಶ್ರೀರಂಗಪಟ್ಟಣದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾರೇ ಆದರೂ ಕಾನೂನು ಉಲ್ಲಂಘಿಸಿದರೆ ಬಿಡುವುದಿಲ್ಲ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ನಿನ್ನೆ ಶ್ರೀರಂಗಪಟ್ಟಣದಲ್ಲಿ ರೂಟ್ ಮಾರ್ಚ್ ಮಾಡಲಾಗಿದೆ. 4ಕ್ಕೂ ಹೆಚ್ಚು ಕಡೆ ಚೆಕ್‍ಪೋಸ್ಟ್ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘಿಸಲು ಅವಕಾಶ ಕೊಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.