ಮಳೆ ಹಾನಿ ಸಂಬಂಧ ಸೂಕ್ತ ಪರಿಹಾರ ಕಾರ್ಯ ಹಾಗೂ ನೆರವು ವಿತರಣೆ ಸಂಬಂಧ ಮುಂದಿನ 15 ದಿನಗಳವರೆಗೆ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳಿಗೆ ರಜೆ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯಾಧ್ಯಂತ ಸುರಿದಂತ ಮಾನ್ಸೂನ್ ಪೂರ್ವ ಭಾರೀ ಮಳೆಗೆ ( Heavy Rain ) ಮೇ.15 ರಿಂದ 21ರವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 430 ಜಾನುವಾರುಗಳು ಬಲಿಯಾಗಿದ್ದಾರೆ. ಮಳೆ ಹಾನಿ ಸಂಬಂಧ ಸೂಕ್ತ ಪರಿಹಾರ ಕಾರ್ಯ ಹಾಗೂ ನೆರವು ವಿತರಣೆ ಸಂಬಂಧ ಮುಂದಿನ 15 ದಿನಗಳವರೆಗೆ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳಿಗೆ ರಜೆ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಖಡಕ್ ಸೂಚನೆ ನೀಡಿದ್ದಾರೆ.
ಇಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೇ.15 ರಿಂದ ಮೇ 21ರವರೆಗೆ ರಾಜ್ಯಾಧ್ಯಂತ ಮಳೆಯಿಂದಾಗಿ 12 ಜನರ ಪ್ರಾಣ ಹೋಗಿದೆ. 430 ಜಾನುವಾರುಗಳ ಸಾವನ್ನಪ್ಪಿವೆ. 1431 ಮನೆಗಳಿಗೆ ನೀರು ನುಗ್ಗಿದೆ. 4242 ಮನೆಗಳಿಗೆ ಭಾಗಶ: ಹಾನಿಯಾಗಿದೆ ಎಂಬ ಮಾಹಿತಿ ನೀಡಿದರು.
ಇನ್ನೂ ಬೇಸಿಗೆ ಮಳೆಯಿಂದಾಗಿ ರಾಜ್ಯದಲ್ಲಿ 7010 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 5736 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಹಾನಿಗೆ ಪರಿಹಾರವಾಗಿ ನೀಡಲು 728 ಕೋಟಿ ರೂ ಡಿಸಿಗಳ ಪಿಡಿ ಖಾತೆಯಲ್ಲಿದೆ. ಅದನ್ನು ಬಳಸಿಕೊಂಡು ಡಿಸಿಗಳು, ಕಾರ್ಯದರ್ಶಿಗಳು ಮುಂದಿನ ಎರಡು ಮೂರು ದಿನ ಅಧಿಕಾರಿಗಳು ಕಡ್ಡಾಯ ಸ್ಥಳ ಪರಿಶೀಲನೆ ಮಾಡಬೇಕು. ಮುಖ್ಯ ಕಾರ್ಯದರ್ಶಿ ಗೆ ಸ್ಥಳ ಭೇಟಿ ಬಗ್ಗೆ ಕಡ್ಡಾಯ ವರದಿ ಸಲ್ಲಿಸಬೇಕು. ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳಿಗೂ ಮುಂದಿನ 15 ದಿನ ರಜೆ ಇಲ್ಲ ಎಂಬುದಾಗಿ ತಿಳಿಸಿದರು.