ಮಳೆ ಸಂಕಷ್ಟ, ಚರ್ಚೆಗೆ ಸರ್ವಪಕ್ಷಗಳ ಸಭೆಗೆ ಆಗ್ರಹ

ಬೆಂಗಳೂರಿನಲ್ಲಿ ಮಳೆ ಅನಾಹುತ ಸಂಬಂಧ ರಾಜ್ಯ ಸರ್ಕಾರ ತುರ್ತು ಸರ್ವ ಪಕ್ಷಗಳ ಸಭೆ ನಡೆಸುವ ಜೊತೆಗೆ ಹಾನಿಗೊಳದ ಮನೆಗಳ ಸಂತ್ರಸ್ತರಿಗೆ ತಲಾ ೫ ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದರು.
ನಗರದಲ್ಲಿಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಕುರಿತ ವೆಬ್ ಸೈಟ್ (ತಿತಿತಿ.bhಚಿಡಿಚಿಣhಚಿiಞಥಿಚಿಣಚಿಥಿಚಿಣಡಿe.iಟಿ) ಅನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.ಪ್ರವಾಹದಿಂದ ಬೆಂಗಳೂರು ನಲುಗುತ್ತಿದ್ದು, ಈ ಅವಾಂತರಕ್ಕೆ ಬಿಜೆಪಿಯೇ ಕಾರಣ. ಭಾರಿ ಮಳೆಯಿಂದಾಗಿ ಬೆಂಗಳೂರು ಜನರು ತತ್ತರಿಸಿದ್ದಾರೆ.
ಬಿಜೆಪಿ ಸರ್ಕಾರದ ವೈಪಲ್ಯದಿಂದ ಈ ಅವಾಂತರ ಸೃಷ್ಠಿಯಾಗಿದೆ. ಮಳೆ ನೀರು ಹೋಗಲು ಜಾಗವಿಲ್ಲ ಎಂದು ವಾಗ್ದಾಳಿ ನಡೆಸಿದರು.ಸರ್ಕಾರ ಒತ್ತುವರಿ ತೆರವು ಮಾಡಿಲ್ಲ. ಒತ್ತುವರಿ ತೆರವು ಮಾಡಲು ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಮಳೆಯಲ್ಲಿ ಮುಳುಗಿರುವ ಮನೆಗಳಿಗೆ ತಲಾ ೫ ಲಕ್ಷ ಪರಿಹಾರ ನೀಡಬೇಕು.
ಅದೇರೀತಿ, ವಾಹನಗಳ ದುರಸ್ತಿ ವೆಚ್ಚವನ್ನು ಭರಿಸಬೇಕು ಎಂದು ಅವರು ಆಗ್ರಹಿಸಿದರು.ರಾಜಕಾಲುವೆ ಮತ್ತು ಕೆರೆಗಳ ಹೂಳು ತೆಗೆಯಿಸದೆ, ಒತ್ತುವರಿ ತೆರವುಗೊಳಿಸದೆ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಮತ್ತು ಸರ್ಕಾರ ಹೊಣೆಗೇಡಿಯಾಗಿದ್ದರಿಂದಲೇ ಸಿಲಿಕಾನ್ ಸಿಟಿಯ ನಿವಾಸಿಗಳು ಈ ಮಳೆಯಲ್ಲಿ ಹೈರಾಣಾಗಿದ್ದಾರೆ ಎಂದರು.ನಮ್ಮ ಸರ್ಕಾರದ ಅವಧಿಯಲ್ಲಿ ೧೯೫೩ ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿ ೧೩೦೦ ಒತ್ತುವರಿಗಳನ್ನು ತೆರೆವುಗೊಳಿಸಿದ್ದೆವು.
ಈ ದಾಖಲೆಗಳು ಸರ್ಕಾರದ ಬಳಿಯಲ್ಲೇ ಇವೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಮೈಗಳ್ಳತನ ಬಿಟ್ಟು ಗಮನಿಸಲಿ ಎಂದು ಅವರು ಹೇಳಿದರು.ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ,ಅನಾಹುತಗಳಿಗೆಲ್ಲಾ ಹಿಂದಿನ ಸರ್ಕಾರದ ಮೇಲೆ ಹೇಳುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ರಾಜಕಾಲುವೆ ಹೂಳೆತ್ತಲು ಸಾವಿರಾರು ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಇಲ್ಲಿ ಕೆಲಸಗಳೇ ಆಗಿಲ್ಲ. ಹಾಗಾದರೆ ನೀವು ಕೊಟ್ಟ ದುಡ್ಡು ಯಾರ ಜೇಬು ಸೇರಿತು.
ಕೆಲಸ ಆಗಿದ್ದರೆ ಇಷ್ಟೊಂದು ಅನಾಹುತ ಆಗಲು ಹೇಗೆ ಸಾಧ್ಯ?.ಅದು ಅಲ್ಲದೆ, ಕೆರೆಗಳ ಹೂಳು ಸಹ ತೆಗೆದಿಲ್ಲ. ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮುಂದಾಗಿಲ್ಲ ಎಂದರು.ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಮತ್ತು ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಮಾಡಿರುವ ಕೆಲಸಗಳನ್ನೂ ಜನರ ಮುಂದಿಡಲಿ ಎಂದ ಅವರು, ಸರ್ಕಾರ ಮಳೆ ಅನಾಹುತ ಸಂಬಂಧ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ, ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿದ್ದು ಕರ್ನಾಟಕದಲ್ಲಿ ೨೧ ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ.
ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದ್ದಾರೆ ಎಂದರು.ಮೊದಲ ದಿನ ೧೬ ಕಿ.ಮೀ ನಡೆದಿದ್ದಾರೆ. ಕರ್ನಾಟಕದಲ್ಲಿ ೨೧ ದಿನ ಪಾದಯಾತ್ರೆ ನಡೆಯಲಿದ್ದು, ದಸರಾ ವೇಳೇ ೨ ದಿನ ರಜೆ ಇರಲಿದೆ ಪಾದಯಾತ್ರೆಗಯಲ್ಲಿ ಎಲ್ಲರೂ ಭಾಗವಹಿಸಬಹುದು. ಭಾಗವಹಿಸುವವರು ರಿಜಿಸ್ಟರ್ ಮಾಡಿಕೊಳ್ಳಬೇಕು ಇಂದಿನಿಂದ ರಿಜಿಸ್ಟ್ರೇಷನ್ ಆರಂಭವಾಗಿದ್ದು, ಹೀಗಾಗಿ ವೆಬ್ ಸೈಟ್ ಲಾಂಚ್ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಮ್ ಅಹ್ಮದ್, ಧ್ರುವನಾರಾಯಣ್, ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಅಲ್ಲಮ್ ವೀರಭದ್ರಪ್ಪ, ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್ ಗೌಡ ಮತ್ತಿತರರು ಉಪಸ್ಥಿತರಿದ್ದರು.