ಮಳೆಹಾನಿ ಪರಿಹಾರಕ್ಕೆ ಕ್ರಮ

ಬೆಂಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಸಮಸ್ಯೆಯಾಗಿದೆ. ಮಳೆಯಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೆಚ್ಚು ಮಳೆಯಾದಾಗ ಕೆಲ ಸಮಸ್ಯೆಗಳು ಆಗುತ್ತಿವೆ. ಈ ಬಾರಿ ಭಾರೀ ಮಳೆಯಿಂದ ಬೊಮ್ಮನಹಳ್ಳಿ, ಮಹದೇವಪುರ ಭಾಗದಲ್ಲಿ ಹಾನಿಯಾಗಿದೆ.
ಇದನ್ನೆಲ್ಲ ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.ಈ ಹಿಂದೆ ಬೆಂಗಳೂರಿನಲ್ಲಿ ಮಳೆಯಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆ ಭಾಗದಲ್ಲಿ ಈಗ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಇಂದು ಸಹ ಅವರು ಮಧ್ಯಾಹ್ನದ ನಂತರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.ಮೂಲಭೂತ ಸೌಕರ್ಯಗಳ ಕೊರತೆಯಿಂದ ಬೆಂಗಳೂರು ಬ್ರಾಂಡ್ ಹಾಳಾಗುತ್ತಿರುವ ಬಗ್ಗೆ ಉದ್ಯಮಿ ಮೋಹನ್‌ದಾಸ್ ಪೈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಟ್ವೀಟ್‌ನ್ನು ಸಾಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ.
ಬೆಂಗಳೂರು ಸಾಕಷ್ಟು ಬೆಳೆದಿದೆ. ಹಲವು ರಾಜ್ಯಗಳಿಂದ ಜನ ಇಲ್ಲಿಗೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಮಳೆಯಾಗಿಲ್ಲ. ಮಳೆಯನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ.
ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುತ್ತೇವೆ. ಯಾರು ಏನೇ ಹೇಳಿದರೂ ಬೆಂಗಳೂರು ಬ್ರಾಂಡ್ ಹಾಳಾಗಲ್ಲ ಎಂದರು.