ಮಳೆಯೋ, ಮಳೆ ಎಲ್ಲೆಡೆ ಜಲಧಾರೆ

ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ೨ ದಿನಗಳಿಂದ ಮತ್ತೆ ಅಬ್ಬರಿಸಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ತಡರಾತ್ರಿ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಇಂದೂ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಮಂಡ್ಯ, ಹಾಸನ, ಕೊಡಗು, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಸುರಿದು ಜನರ ಬದುಕು ಹೈರಾಣವಾಗಿದೆ.ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ೨೭ ಕೆರೆಗಳು ತುಂಬಿ ಕೋಡಿಬಿದ್ದಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿ ೭ ಮತ್ತು ಕಡೂರು ತಾಲ್ಲೂಕಿನಲ್ಲಿ ೧೬ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.ಕೋಲಾರದಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ಕೋಲಾರಮ್ಮ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕಾಲುವೆ ಉಕ್ಕಿ ಹರಿದು, ಅಕ್ಕಪಕ್ಕದ ತೋಟಗಳಿಗೆ ಮಳೆನೀರು ನುಗ್ಗಿದೆ. ಇದರಿಂದಾಗಿ ತರಕಾರಿ, ಬೆಳೆಗಳು ನೀರು ಪಾಲಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಕೋಲಾರ ನಗರದ ಗಣೇಶ ದೇಗುಲ ಜಲಾವೃತಗೊಂಡಿದೆ.
ಕೋಲಾರಮ್ಮನ ಕೆರೆ ಕೋಡಿಬಿದ್ದು, ನೀರು ಹರಿದು ಹೋಗುತ್ತಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚೋಳಶೆಟ್ಟಿ ಗ್ರಾಮದಲ್ಲಿ ಕೋಳಿಫಾರಂಗೆ ನೀರು ನುಗ್ಗಿ ೧೫ ಸಾವಿರಕ್ಕೂ ಅಧಿಕ ಕೋಳಿಗಳು ನೀರು ಪಾಲಾಗಿವೆ.ಮಂಡ್ಯ ಜಿಲ್ಲೆಯಲ್ಲೂ ವರುಣ ಆರ್ಭಟಿಸಿದ್ದಾನೆ.
ತಡರಾತ್ರಿ ಸುರಿದ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆರೆ ಕೋಡಿ ಬಿದ್ದು, ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ, ನಾಟಿ ಮಾಡಿದ್ದ ಭತ್ತದ ಪೈರು ನಾಶವಾಗಿದೆ.ಬೆಳಗಾವಿ ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದಾಗಿ ಜನಜೀವನ ಏರುಪೇರಾಗಿದೆ.
ಒಂದು ಗಂಟೆಗೂ ಹೆಚ್ಚು ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಪಾತ್ರೆಪಗಡೆಗಳು ನೀರಿನಲ್ಲಿ ತೇಲುವಂತಾಗಿ ಜನರು ಜಾಗರಣೆ ಮಾಡುವಂತಾಗಿದೆ.ಯಾದಗಿರಿ ಜಿಲ್ಲೆಯಲ್ಲೂ ಮಳೆಯಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಸಿಮೆಂಟ್ ತುಂಬಿಕೊಂಡು ಬಂದಿದ್ದ ಲಾರಿ ಚಾಲಕ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾನೆ.ಹಳ್ಳ ದಾಟುವ ವೇಳೆ ಲಾರಿ ಪ್ರವಾಹದಲ್ಲಿ ಮಗುಚಿ ಬಿದ್ದಿದೆ.
ಲಾರಿ ಬೀಳುತ್ತಿದ್ದಂತೆ ಪ್ರಾಣ ರಕ್ಷಣೆಗೆ ಲಾರಿ ಮೇಲ್ಭಾಗದಲ್ಲಿ ನಿಂತಿದ್ದ ಚಾಲಕ ನೆರವಿಗಾಗಿ ಅಂಗಲಾಚಿದ್ದಾನೆ. ಆದರೆ, ಪರಿಸ್ಥಿತಿ ಏನಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಬೆಂಗಳೂರಿನಲ್ಲೂ ವರ್ಷಧಾರೆಸಿಲಿಕಾನ್ ಸಿಟಿಯಲ್ಲೂ ಕಳೆದೆರೆಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ.
ನಗರದ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲಾಲ್‌ಬಾಗ್, ಸೌತ್‌ಎಂಡ್ ಸರ್ಕಲ್, ಜಯನಗರ, ಜೆಪಿ ನಗರ, ಜೆಸಿ ರಸ್ತೆ, ಶಾಂತಿನಗರ ಸುತ್ತಮುತ್ತ ತಡರಾತ್ರಿ ೧ ಗಂಟೆ ಕಾಲ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿವೆ.ಹಲವು ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗಿ ರಸ್ತೆಗಳು ಕೆರೆಗಳಂತಾಗಿವೆ.
ಮಳೆಯಿಂದಾಗಿ ಬಿಟಿಎಂ ಲೇಔಟ್, ಬಿಳೇಕ ಹಳ್ಳಿಯ ಅನುಗ್ರಹ ಬಡಾವಣೆಯಲ್ಲಿ ನೀರು ನಿಂತು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಮಿಸಿ ನೀರು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾದರು.ಕೆಲ ಮನೆಗಳಿಗೂ ನೀರು ನುಗ್ಗಿ ಭಾರಿ ಅವಾಂತರ ಸೃಷ್ಠಿಯಾಗಿ ಸಾರ್ವಜನಿಕರು ಪರದಾಡುವಂತಾಯಿತು.