
ಅತಿ ಹೆಚ್ಚು ಮಳೆಯಾಗಬೇಕಿದ್ದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಮುಂಗಾರಿನ ಆರಂಭದಲ್ಲೇ ಮಳೆಕೊರತೆ ಉಂಟಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಜೂನ್ 1ರಿಂದ ನಿನ್ನೆಯವರೆಗೆ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ.71ರಷ್ಟು ಮಳೆಕೊರತೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ಶೇ. 31ರಷ್ಟು ಕೊರತೆಯಾಗಿದೆ.ದುರ್ಬಲ ಮುಂಗಾರಿನಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಆರಂಭದಲ್ಲೇ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರಿಸಬೇಕಾಗಿದ್ದ ಮುಂಗಾರು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿಕೆ ಕಂಡಿಲ್ಲ. ಮುಂಗಾರು ಆರಂಭವಾಗಿ 8-10 ದಿನಗಳು ಕಳೆದರೂ ಚೇತರಿಕೆ ಕಂಡು ಬಂದಿಲ್ಲ. ಆದರೆ, ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಹಲವೆಡೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.100ರಷ್ಟು ಹೆಚ್ಚು ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಶೇ.50ರಷ್ಟು ಉತ್ತಮ ಮಳೆಯಾಗಿದೆ. ಜ.1ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ವಾಡಿಕೆಗಿಂತ ಶೇ.82ರಷ್ಟು ಹೆಚ್ಚಿನ ಮಳೆಯಾಗಿದ್ದರೆ, ಜನವರಿಯಿಂದ ಮೇ ನಡುವಿನ ಅವಯಲ್ಲೂ ಶೇ.100ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಮಾರ್ಚ್‍ನಿಂದ ಮೇ ಅವಧಿಯಲ್ಲೂ ವಾಡಿಕೆಗಿಂತ ಶೇ.100ರಷ್ಟು ಮಳೆಯಾಗಿದೆ. ಮುಂಗಾರು ಪೂರ್ವ ಮಳೆ ಅಕ ಪ್ರಮಾಣದಲ್ಲಿ ಬಿದ್ದ ಪರಿಣಾಮ ಆರಂಭದಲ್ಲೇ ಮುಂಗಾರು ದುರ್ಬಲವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್. ಪ್ರಕಾಶ್ ತಿಳಿಸಿದರು.
ಒಳನಾಡಿನಲ್ಲಿ ಚದುರಿದಂತೆ ಮಳೆ ಮುಂದುವರೆಯಲಿದೆ. ಆದರೆ, ಮುಂಗಾರು ಮಳೆ ಕರಾವಳಿ ಮತ್ತು ಮಲೆನಾಡನ್ನು ಬೈಪಾಸ್ ಮಾಡಿದಂತೆ ಕಂಡು ಬರುತ್ತಿದೆ. ಜೂ.10ರ ನಂತರ ಮುಂಗಾರು ಚುರುಕಾಗಲಿದ್ದು, ಆ ನಂತರ ನಾಲ್ಕೈದು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದರು.ರಾಜ್ಯದಲ್ಲಿ ಇದುವರೆಗೂ ಮುಂಗಾರು ಮಳೆ ವ್ಯಾಪಕ ಪ್ರಮಾಣದಲ್ಲಿ ಎಲ್ಲೆಡೆ ಬಿದ್ದಿಲ್ಲ. ಬೇಸಿಗೆ ಮಳೆಯಂತೆ ಅಲ್ಲಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ರೈತರು ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.