
ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ ರಸ್ತೆ ಪಕ್ಕದಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಜಾಜ್‍ರ್ ಜಿಲ್ಲೆಯ ಟೋಲ್‍ಪ್ಲಾಜಾ ಬಳಿ ನಸುಕಿನ ಜಾವ ಸಂಭವಿಸಿದೆ.ಅಸೋಧ ಟೋಲ್ ಪ್ಲಾಸಾದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಕುಂಡ್ಲಿಮನೆಸಾರ್ ಪಲ್ವಾರ್ ಎಕ್ಸ್‍ಪ್ರೆಸ್ ವೇನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರು ಉತ್ತರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಅಪಘಾತ ನಡೆದ ಕೂಡಲೇ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಟ್ರಕ್ ನೋಂದಣಿ ನಂಬರ್‍ನಿಂದ ಮಾಲೀಕನನ್ನು ಪತ್ತೆಹಚ್ಚಲಾಗಿದೆ.
ಆದಷ್ಟು ಬೇಗ ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಮದ್ಯಪಾನ ಮಾಡಿರಬಹುದು ಅಥವಾ ನಿದ್ದೆಯ ಮಂಪರಿನಲ್ಲಿ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಎಕ್ಸ್‍ಪ್ರೆಸ್ ವೇ ಬಳಿ ನಡೆಯುತ್ತಿದ್ದ ನಿರ್ಮಾಣ ಯೋಜನೆಯಲ್ಲಿ ಸುಮಾರು 18 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ಬಳಿಕ ಪ್ರತಿ ದಿನ ಎಕ್ಸ್‍ಪ್ರೆಸ್ ವೇ ಪಕ್ಕದಲ್ಲೇ ಮಲಗುತ್ತಿದ್ದರು. ಇಂದು ನಸುಕಿನ ಜಾವ ಟ್ರಕ್ ಕಾರ್ಮಿಕರ ಮೇಲೆ ಹರಿದ ಪರಿಣಾಮ ದುರಂತ ಸಂಭವಿಸಿದೆ.ಗಾಯಗೊಂಡವರನ್ನು ಪಿಜಿಎಂಐಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಯಶ್ವರ್ಧನ್ ತಿಳಿಸಿದ್ದಾರೆ.